ಪಡ್ಡೆಹುಲಿ ಸಿನಿಮಾ ಬಳಿಕ ಶ್ರೇಯಸ್ ಮಂಜು ಅಭಿನಯದ ಬಹು ನಿರೀಕ್ಷಿತ ಚಿತ್ರ ರಾಣ ಇಂದು ರಾಜ್ಯಾದ್ಯಂತ 150ಕ್ಕೂ ಹೆಚ್ಚು ಚಿತ್ರಮಂದಿಗಳಲ್ಲಿ ಬಿಡುಗಡೆ ಆಗುವ ಮೂಲಕ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಟ್ರೈಲರ್ನಿಂದಲೇ ಕನ್ನಡ ಚಿತ್ರರಂಗದಲ್ಲಿ ಕ್ರೇಜ್ ಹುಟ್ಟಿಸಿದ್ದ ರಾಣ ಸಿನಿಮಾ ಅಂದುಕೊಂಡಂತೆ ಮಾಸ್ ಆ್ಯಕ್ಷನ್ ಜೊತೆಗೆ ಸಂಬಂಧಗಳ ಮೌಲ್ಯ ಹೇಳುವ ಚಿತ್ರವಾಗಿದೆ.
ಮಧ್ಯಮ ವರ್ಗದ ಕುಟುಂಬದ ನಾಯಕ ರಾಣ ಅಂದ್ರೆ ಶ್ರೇಯಸ್ ಮಂಜು ದಕ್ಷ ಪೊಲೀಸ್ ಅಧಿಕಾರಿಯಾಗುವ ಕನಸು ಕಾಣುತ್ತಾನೆ. ಈ ಕಾರಣಕ್ಕೆ ನಾಯಕ ತಮ್ಮ ಹಳ್ಳಿಯಿಂದ ಸಿಲಿಕಾನ್ ಸಿಟಿಗೆ ಬರುತ್ತಾನೆ. ಇಲ್ಲಿ ಸ್ನೇಹಿತರ ಜೊತೆ ಕಾರ್ ಡ್ರೈವಿಂಗ್ ಕೆಲಸ ಮಾಡಿಕೊಂಡು, ಪೊಲೀಸ್ ಅಧಿಕಾರಿಯಾಗಲು ಪೊಲೀಸ್ ಕ್ಯಾಂಪ್ನಲ್ಲಿ ಟ್ರೈನಿಂಗ್ ಮಾಡುತ್ತಿರುತ್ತಾನೆ.
ಈ ಮಧ್ಯೆ ತಮ್ಮ ಹಳ್ಳಿಯ ಮಹಿಳೆಯೋರ್ವರ ಗಂಡ ನಾಪತ್ತೆ ಆಗಿದ್ದಾನೆ ಅಂತಾ ಹುಡುಕಲು ಶುರು ಮಾಡಿದಾಗ ಅಲ್ಲಿ ಕಪಾಲಿ ಎಂಬ ದೊಡ್ಡ ರೌಡಿಯ ಅನ್ಯಾಯದ ಲೋಕ ತೆರೆದುಕೊಳ್ಳುತ್ತದೆ. ಆಗ ನಾಯಕ ನಟ ರೌಡಿಯ ವಿರುದ್ಧ ಹೇಗೆ ತಿರುಗಿ ಬೀಳುತ್ತಾನೆ? ಅಂದುಕೊಂಡಂತೆ ರಾಣ ಪೊಲೀಸ್ ಅಧಿಕಾರಿಯಾಗುತ್ತಾನಾ? ಅನ್ನೋದು ರಾಣ ಚಿತ್ರದ ಕಥೆ.
ರಾಣ ಪಾತ್ರದಲ್ಲಿ ಶ್ರೇಯಸ್ ಮಂಜು ಅವರು ತಮ್ಮ ಹಿಂದಿನ ಸಿನಿಮಾಗಿಂತ ಆ್ಯಕ್ಟಿಂಗ್ ಜೊತೆ ಮಾಸ್ ಹೀರೋ ಆಗಿ ಸಿಲ್ವರ್ ಸ್ಕ್ರೀನ್ ಮೇಲೆ ಅಬ್ಬರಿಸಿದ್ದಾರೆ. ನಾಯಕನ ಅತ್ತೆ ಮಗಳಾಗಿ ರೀಷ್ಮಾ ನಾಣಯ್ಯ ಮಿಂಚಿಸಿದ್ದಾರೆ. ರಾಣ ಸ್ನೇಹಿತರಾಗಿ ಅಶೋಕ್, ಗಿರಿ ಹಾಗು ಕಾಮಿಡಿ ಶೋ ಪ್ರವೀಣ್ ಆಗಾಗ ತಮ್ಮ ಪಂಚಿಂಗ್ ಮಾತುಗಳಿಂದ ಕಚಗುಳಿ ಕೊಡ್ತಾರೆ.