ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಶುಕ್ರವಾರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್ನಲ್ಲಿದ್ರು. ಕರುನಾಡ ಚಕ್ರವರ್ತಿ ಶಿವಣ್ಣನ ಬಗ್ಗೆ ಸಿನಿಪ್ರಿಯರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇದಕ್ಕೆ ಕಾರಣ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಮಾಸ್ ಅಂಡ್ ಫ್ಯಾಮಿಲಿ ಸೆಂಟಿಮೆಂಟ್ ಹೊಂದಿರುವ 'ಜೈಲರ್' ಚಿತ್ರ.
ಹೌದು, ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅವರು ವಿಶೇಷ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಈ ಪಾತ್ರಕ್ಕೆ ಈಗ ಭಾಷೆಯನ್ನು ಮೀರಿ ಕನ್ನಡದ ಜೊತೆಗೆ ತಮಿಳು, ತೆಲುಗು ಹಾಗೂ ಮಲೆಯಾಳಂ ಪ್ರೇಕ್ಷಕರೂ ಕೂಡ ಹ್ಯಾಟ್ರಿಕ್ ಹೀರೋ ಎಂಟ್ರಿ ಹಾಗೂ ಕ್ಲೈಮಾಕ್ಸ್ನಲ್ಲಿನ ಶಿವಣ್ಣನ ಖದರ್ಗೆ ಫಿದಾ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿಯೂ ಕೂಡ ಶಿವರಾಜ್ ಕುಮಾರ್ ಟ್ರೆಂಡಿಂಗ್ನಲ್ಲಿದ್ದರು. ತಮಿಳು ಭಾಷಾ ಅಭಿಮಾನಿಗಳು ಶಿವರಾಜ್ ಕುಮಾರ್ ಎಂಟ್ರಿ ಹಾಗೂ ಲುಕ್ ಬಗ್ಗೆ ಮನದುಂಬಿ ಕೊಂಡಾಡುತ್ತಿದ್ದಾರೆ.
ಅಭಿಮಾನಿಗಳ ಪ್ರೀತಿಗೆ ಮನಸೋತ ನಟ ಶಿವರಾಜ್ ಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮೂಲಕ ಕೃತಜ್ಞತೆ ತಿಳಿಸಿದ್ದಾರೆ. ನಾನು ರಜನಿಕಾಂತ್ ಅವರ ಜೊತೆ ಸ್ಕ್ರೀನ್ ಹಂಚಿಕೊಂಡಿರುವುದು ಒಂದು ಹೆಮ್ಮೆಯ ವಿಚಾರ. ಇದೆಕ್ಕೆಲ್ಲ ಕಾರಣರಾದ ನಿರ್ದೇಶಕ ನೆಲ್ಸನ್ ಅವರಿಗೆ ಧನ್ಯವಾದ ಎಂದು ಶಿವಣ್ಣ ಹೇಳಿದ್ದಾರೆ.