ಕರ್ನಾಟಕ

karnataka

ETV Bharat / entertainment

'ಪ್ರೇಕ್ಷಕರ ಕೊರತೆ ಸುಳ್ಳು ಮಾಡಿದ್ದಕ್ಕೆ ಸಂತೋಷವಾಗಿದೆ': 'ಹಾಸ್ಟೆಲ್​ ಹುಡುಗರಿಗೆ' ರಾಜ್​ ಬಿ.ಶೆಟ್ಟಿ ಪ್ರೀತಿಯ ಪತ್ರ - ಈಟಿವಿ ಭಾರತ ಕನ್ನಡ

ನಟ, ನಿರ್ದೇಶಕ ರಾಜ್​ ಬಿ. ಶೆಟ್ಟಿ 'ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ' ತಂಡಕ್ಕೆ ಪ್ರೀತಿಯ ಪತ್ರವೊಂದನ್ನು ಬರೆದಿದ್ದಾರೆ.

Actor Raj B shetty
'ಹಾಸ್ಟೆಲ್​ ಹುಡುಗರಿಗೆ' ರಾಜ್​ ಬಿ ಶೆಟ್ಟಿ ಪತ್ರ

By

Published : Jul 23, 2023, 1:30 PM IST

ಯುವ ಪ್ರತಿಭೆಗಳ 'ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಶುಕ್ರವಾರ ಬಿಡುಗಡೆಗೊಂಡು ಪ್ರೇಕ್ಷಕರಿಂದ ಭರಪೂರ ಮೆಚ್ಚುಗೆ ಪಡೆದುಕೊಂಡಿದೆ. ಎರಡೂ ದಿನವೂ ಹೌಸ್​ ಫುಲ್​ ಪ್ರದರ್ಶನ ಕಂಡಿದೆ. ಆರಂಭದಿಂದಲೂ ನಾನಾ ಬಗೆಯ ಪ್ರಚಾರ ಮಾಡಿ, ಇಡೀ ಸ್ಯಾಂಡಲ್​ವುಡ್​ ಸಾಥ್​ ಕೊಟ್ಟಿರುವ ಚಿತ್ರವು ಎಲ್ಲ ವರ್ಗದ ಪ್ರೇಕ್ಷಕರನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದೇ ಖುಷಿಯಲ್ಲಿ ನಟ, ನಿರ್ದೇಶಕ ರಾಜ್​ ಬಿ. ಶೆಟ್ಟಿ 'ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ' ತಂಡಕ್ಕೆ ಪ್ರೀತಿಯ ಪತ್ರವೊಂದನ್ನು ಬರೆದಿದ್ದಾರೆ.

ರಾಜ್​ ಪತ್ರ ಹೀಗಿದೆ..:"ಪ್ರೀತಿಯ HHB ತಂಡಕ್ಕೆ.. ಕನ್ನಡ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಕನ್ನಡ ಪ್ರೇಕ್ಷಕರ ಕೊರತೆಯಿದೆ ಎಂಬ ಹತಾಶೆಯನ್ನು ಸತ್ಯವೆಂದು ನಂಬಿ ಕುಳಿತಿದ್ದೆವು ನಾವು. ಮೊದಲ ಬಾರಿಗೆ ನಮ್ಮ ನಂಬಿಕೆ ಸುಳ್ಳಾಗಿದ್ದಕ್ಕೆ ಅಪಾರ ಸಂತೋಷವಿದೆ. ಅದನ್ನು ಕೆಡವಿದ ನಿಮ್ಮ ತಂಡಕ್ಕೆ ನಮ್ಮ ಪ್ರಣಾಮಗಳು. ಚಿತ್ರಮಂದಿರದಲ್ಲಿ ಪ್ರೇಕ್ಷಕರು ನುಗ್ಗಬೇಕಾದಲ್ಲಿ ನೂರಾರು ಕೋಟಿ ಬಜೆಟ್‌ನ ಅಗತ್ಯವಿದೆ, ಸ್ಟಾರ್ ನಟರ, ನಿರ್ದೇಶಕರ ಅನಿವಾರ್ಯತೆಯಿದೆ ಎಂಬೆಲ್ಲ ಸುಳ್ಳುಗಳನ್ನು ಸಮರ್ಥವಾಗಿ ನಿವಾಳಿಸಿ ಎಸೆದದ್ದಕ್ಕೆ ಧನ್ಯವಾದಗಳು.

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ, ಇದು ಹುಚ್ಚು ಮನಸ್ಸಿನ ಅಭಿವ್ಯಕ್ತಿ. ಹತ್ತಾರು ಹುಡುಗರು ಗಂಭೀರವಾಗಿ ಮಾಡಿದ ತಮಾಷೆಯ ಸಿನಿಮಾ. ಜೊತೆಗೆ ಈ ಸಿನಿಮಾ ಮುಂದೆ ಬರುವ ಇನ್ನಷ್ಟು ಹುಚ್ಚು ಹುಡುಗರಿಗೆ ಧೈರ್ಯ. ಇಂಥ ಸಿನಿಮಾಗಳು ಗೆದ್ದಾಗ ಮಾತ್ರ ಚಿತ್ರೋದ್ಯಮಕ್ಕೆ ನಿಜವಾದ ಲಾಭ. ಕನಸುಗಳಿಗೆ ಬಂಡವಾಳದ ಭಯವಿರಬಾರದು, ಕನಸುಗಳಿಗೆ ಸಿದ್ದ ಸೂತ್ರಗಳ ಹೊರೆಯಿರಬಾರದು, ಕನಸುಗಳಿಗೆ ವ್ಯಾಪಾರದ ಹಂಗಿರಬಾರದು.

ಇದನ್ನೂ ಓದಿ:ರಮ್ಯಾ ಸಲ್ಲಿಸಿದ್ದ ಅರ್ಜಿ ವಜಾ.. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡಕ್ಕೆ ಬಿಗ್ ರಿಲೀಫ್

ಕನಸುಗಳಿಗೆ ಪ್ರಾಮಾಣಿಕತೆ, ಹಸಿವು, ಧೈರ್ಯ, ಅಪಾರ ಹುಚ್ಚು, ಒಂದಷ್ಟು Practicality ಇಷ್ಟು ಜೊತೆಗಿದ್ದರೆ "ನೀವೂ" ಒಂದು ಸಿನಿಮಾ ಮಾಡಬಹುದು. ಇದನ್ನು ನಿರೂಪಿಸಿ ಗೆದ್ದ HHB ತಂಡಕ್ಕೆ ಜಯವಾಗಲಿ. ಪ್ರೀತಿಯಿಂದ... ರಾಜ್ ಬಿ ಶೆಟ್ಟಿ" ಎಂದು ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ' ತಂಡಕ್ಕೆ ರಾಜ್​ ಬಿ ಶೆಟ್ಟಿ ಪತ್ರ ಬರೆದಿದ್ದಾರೆ.

ಯೂತ್ ಸಬ್ಜೆಕ್ಟ್ ಕಥೆಯನ್ನೊಳಗೊಂಡ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾವನ್ನು ನಿತಿನ್ ಕೃಷ್ಣಮೂರ್ತಿ ಅವರೇ ಕಥೆ ಬರೆದು ನಿರ್ದೇಶಿಸಿದ್ದಾರೆ. ಬಹುತೇಕ ರಂಗಭೂಮಿ ಪ್ರತಿಭೆಗಳು ನಟಿಸಿರುವ ಈ ಚಿತ್ರವನ್ನು ವರುಣ್ ಸ್ಟುಡಿಯೋಸ್ ಹಾಗೂ ಗುಲ್ ಮೋಹರ್ ಫಿಲ್ಮ್ಸ್ ಬ್ಯಾನರ್ ಅಡಿ ಪ್ರಜ್ವಲ್ ಬಿ.ಪಿ, ವರುಣ್ ಕುಮಾರ್ ಗೌಡ, ನಿತಿನ್ ಕೃಷ್ಣಮೂರ್ತಿ, ಅರವಿಂದ್ ಕೆ.ಕಶ್ಯಪ್ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ.

ಸಿಂಪಲ್​ ಸ್ಟಾರ್​​ ರಕ್ಷಿತ್ ಶೆಟ್ಟಿ ತಮ್ಮದೇ ಪರಂವಃ ಪಿಕ್ಚರ್ಸ್ ಮೂಲಕ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಛಾಯಾಗ್ರಹಣ, ಸುರೇಶ್ ಸಂಕಲನವಿದೆ. ಸಿನಿಮಾಗೆ ದಿಗಂತ್, ರಿಷಬ್ ಶೆಟ್ಟಿ, ಶೈನಿ ಶೆಟ್ಟಿ, ಪವನ್ ಕುಮಾರ್, ರಮ್ಯಾ ಸಾಥ್ ಕೊಟ್ಟಿದ್ದಾರೆ.

ಇದನ್ನೂ ಓದಿ:ಹಾಸ್ಟೆಲ್​ ಹುಡುಗರ ಸಕ್ಸಸ್​ ಪಾರ್ಟಿಗೆ ಹ್ಯಾಟ್ರಿಕ್​ ಹೀರೋ ಶಿವರಾಜ್ ಕುಮಾರ್​ ಸಾಥ್​

ABOUT THE AUTHOR

...view details