ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾಗಳ ಮೂಲಕ ಸಿನಿಪ್ರಿಯರ ಮನ ಗೆದ್ದಿರುವ ನಟ ಪ್ರಜ್ವಲ್ ದೇವರಾಜ್. ತತ್ಸಮ ತದ್ಭವ, ಮಾಫಿಯಾ ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಪ್ರಜ್ವಲ್ ದೇವರಾಜ್ ಅಭಿಮಾನಿಗಳಲ್ಲಿ ಒಂದು ಮನವಿ ಮಾಡಿದ್ದಾರೆ. ತನಗಾಗಿ ಖರ್ಚು ಮಾಡದೇ ಬಡಮಕ್ಕಳಿಗೆ ಸಹಾಯ ಮಾಡಿ ಎಂದು ತಮ್ಮ ಅಪಾರ ಸಂಖ್ಯೆಯ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.
ನಿಮ್ಮೊಂದಿಗೆ ಸಮಯ ಕಳೆಯಬೇಕೆಂದುಕೊಂಡಿದ್ದೇನೆ:ಮುಂದಿನ ಜುಲೈ 4ರಂದು ನಟ ಪ್ರಜ್ವಲ್ ದೇವರಾಜ್ ಅವರ ಹುಟ್ಟುಹಬ್ಬ. ಕಳೆದ ಐದು ವರ್ಷಗಳಿಂದ ತಮ್ಮ ಜನ್ಮದಿನ ಆಚರಿಸಿಕೊಳ್ಳದ ಪ್ರಜ್ವಲ್ ದೇವರಾಜ್ ಈ ವರ್ಷ ಬರ್ತ್ ಡೇ ಸೆಲೆಬ್ರೆಟ್ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಜ್ವಲ್ ದೇವರಾಜ್ ಅಭಿಮಾನಿಗಳಲ್ಲೊಂದು ಮನವಿ ಮಾಡಿದ್ದಾರೆ. ''ನಿಮ್ಮ (ಅಭಿಮಾನಿಗಳು) ಜೊತೆ ನಮ್ಮ ಮನೆ ಹತ್ತಿರ ಹುಟ್ಟುಹಬ್ಬ ಆಚರಿಸಿಕೊಳ್ಳಲು ತೀರ್ಮಾನಿಸಿದ್ದೇನೆ. ಎಲ್ಲರೂ ಬನ್ನಿ, ಊಟ ಮಾಡಿಕೊಂಡು ಹೋಗಿ. ನಿಮ್ಮ ಜೊತೆ ಹೆಚ್ಚಿನ ಸಮಯ ಕಳೆಯಬೇಕೆಂದುಕೊಂಡಿದ್ದೇನೆ. ಆದರೆ ನಿಮ್ಮೆಲ್ಲರಲ್ಲಿ ನನ್ನದೊಂದು ಮನವಿ, ಯಾರೂ ಹಾರ ಹಾಗೂ ಕೇಕ್ ತರಬೇಡಿ. ಅದರ ಬದಲು ಬಡಮಕ್ಕಳಿಗೆ ಹಾಗೂ ಬಡವರಿಗೆ ಆ ಹಣದಲ್ಲಿ ಸಹಾಯ ಮಾಡಿ'' ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ಪ್ರಜ್ವಲ್ ಸಿನಿಮಾಗಳು:ಪ್ರಜ್ವಲ್ ದೇವರಾಜ್ ಕೈಯಲ್ಲೀಗ ಮೂರು ಸಿನಿಮಾಗಳಿವೆ. ತತ್ಸಮ ತದ್ಭವ ಹಾಗೂ ಮಾಫಿಯಾ ಚಿತ್ರಗಳಲ್ಲಿ ನಟ ಬ್ಯುಸಿಯಾಗಿದ್ದಾರೆ. ನಟಿ ಮೇಘನಾ ರಾಜ್ ಜೊತೆ ನಟಿಸಿರುವ ತತ್ಸಮ ತದ್ಭವ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಅದಷ್ಟು ಬೇಗ ಈ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಕೆಲಸ ಮಾಡುತ್ತಿದೆ.