ಗುಲ್ಟು ಸಿನಿಮಾ ಮೂಲಕ ಸ್ಯಾಂಡಲ್ವುಡ್ ಸಿನಿರಸಿಕರ ಮನ ಗೆದ್ದಿರುವ ಯುವ ನಟ ನವೀನ್ ಶಂಕರ್ ಧರಣಿ ಮಂಡಲ ಮಧ್ಯದೊಳಗೆ ಚಿತ್ರದದಿಂದ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ''ಮೂಲತಃ ನಮ್ಮವರೇ'' ಅನ್ನೋ ಮತ್ತೊಂದು ವಿಭಿನ್ನ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಶೀರ್ಷಿಕೆಯನ್ನು ಇಂದು ಚಿತ್ರತಂಡ ಅನಾವರಣ ಮಾಡುವ ಮೂಲಕ ಈ ಸಿನಿಮಾದ ವಿಶೇಷತೆ ಹಂಚಿಕೊಂಡಿದೆ.
ಮೊದಲು ಮಾತು ಶುರು ಮಾಡಿದ ನವೀನ್ ಶಂಕರ್, ಚಿತ್ರತಂಡದವರು ಎಲ್ಲವನ್ನೂ ಸಿದ್ಧ ಮಾಡಿಕೊಂಡು ನಾಯಕನ ಹುಡುಕಾಟದಲ್ಲಿದ್ದರು. ಕೆಲವು ನಾಯಕರನ್ನು ಸಂಪರ್ಕ ಕೂಡ ಮಾಡಿದ್ದರು. ಆನಂತರ ಇವರಿಗೆ ನಾನು ಸಿಕ್ಕಿದೆ. ಕಥೆ ತುಂಬಾ ಚೆನ್ನಾಗಿದೆ. ನಾನು ಇಲ್ಲಿಯವರೆಗೂ ಮಾಡಿರದ ಕಥೆ ಎನ್ನಬಹುದು. ಅಪ್ಪ - ಮಗನ ಸೆಂಟಿಮೆಂಟ್ ಸನ್ನಿವೇಶಗಳು ಎಲ್ಲರ ಮನಸ್ಸಿಗೆ ಹತ್ತಿರವಾಗಲಿದೆ. ಶೋಭ್ ರಾಜ್ ನನ್ನ ತಂದೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಮುಂಬೈನ ತಾನ್ಯ ಈ ಚಿತ್ರದ ನಾಯಕಿ. ಅವಿನಾಶ್, ಮಾಳವಿಕ ಅವಿನಾಶ್, ತೆಲುಗಿನ ಸತ್ಯಪ್ರಕಾಶ್ ಸೇರಿದಂತೆ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ನನ್ನ ಈ ಹಿಂದಿನ ಚಿತ್ರಗಳಲ್ಲಿ ಆ್ಯಕ್ಷನ್, ಡ್ಯಾನ್ಸ್ಗಳಿಗೆ ಅಷ್ಟು ಅವಕಾಶವಿರಲಿಲ್ಲ. ಈ ಚಿತ್ರದಲ್ಲಿ ಎಲ್ಲವೂ ಇದೆ ಎಂದು ತಮ್ಮ ಪಾತ್ರ ಹಾಗೂ ಚಿತ್ರದ ಬಗ್ಗೆ ನಟ ನವೀನ್ ಶಂಕರ್ ಹೇಳಿದರು.