ನಿರ್ಮಾಪಕ, ನಟ ಕಮಲ್ ರಶೀದ್ ಖಾನ್ ವಿವಾದಾತ್ಮಕ ಟ್ವೀಟ್ ಸಂಬಂಧ ಬಂಧನಕ್ಕೊಳಗಾಗಿದ್ದರು. ಇದೀಗ ಎದೆನೋವಿನಿಂದ ಬಳಲುತ್ತಿರುವ ಅವರನ್ನು ಮಲಾಡ್ ಪೊಲೀಸರು ಕಂಡಿವಲಿಯ ಶತಾಬ್ದಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
2020ರಲ್ಲಿ ಕಮಲ್ ರಶೀದ್ ಖಾನ್ ವಿವಾದಾತ್ಮಕ ಟ್ವೀಟ್ ಮಾಡಿದ್ದರು. ಆ ಪ್ರಕರಣದಲ್ಲಿ ಕಮಲ್ ರಶೀದ್ ಖಾನ್ ವಿರುದ್ಧ ಮಲಾಡ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಕಮಲ್ ರಶೀದ್ ಖಾನ್ ಕಳೆದ ಎರಡು ವರ್ಷಗಳಿಂದ ವಿದೇಶದಲ್ಲಿದ್ದ ಕಾರಣ ಅವರನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ. ಆದರೆ ನಿನ್ನೆ ವಿದೇಶದಿಂದ ಮುಂಬೈ ತಲುಪಿದ ಕೂಡಲೇ ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲೇ ಮಲಾಡ್ ಪೊಲೀಸರು ಬಂಧಿಸಿದ್ದಾರೆ. 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಗಳ ಪ್ರಕಾರ, 2020ರಲ್ಲಿ ನಟರಾದ ಇರ್ಫಾನ್ ಖಾನ್ ಮತ್ತು ರಿಷಿ ಕಪೂರ್ ಅವರ ಸಾವಿನ ಬಗ್ಗೆ ಅವಮಾನಕರವಾಗಿ ಟ್ವೀಟ್ ಮಾಡಿದ್ದರು. ನಂತರ ಸಾಮಾಜಿಕ ಕಾರ್ಯಕರ್ತ ರಾಹುಲ್ ಕನಾಲ್ ಅವರು ಕಮಲ್ ವಿರುದ್ಧ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ವಿವಾದಾತ್ಮಕ ಟ್ವೀಟ್ ಬಗ್ಗೆ ಪೊಲೀಸರು ಕಮಲ್ ರಶೀದ್ ಖಾನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಆದರೆ ಕಮಲ್ ವಿದೇಶದಲ್ಲಿರುವ ಕಾರಣ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿರಲಿಲ್ಲ. ಇದೀಗ ಮುಂಬೈ ತಲುಪಿದ ತಕ್ಷಣ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಇಷ್ಟೇ ಅಲ್ಲದೇ ಇನ್ನೂ ಅನೇಕ ಗಣ್ಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪ ಹೊತ್ತಿದ್ದಾರೆ ಕಮಲ್ ರಶೀದ್ ಖಾನ್.
ಇದನ್ನೂ ಓದಿ:ರಾಷ್ಟ್ರೀಯ ಕ್ರೀಡಾ ದಿನ: ನೀವು ನೋಡಲೇಬೇಕಾದ ಕ್ರೀಡಾ ಸ್ಫೂರ್ತಿದಾಯಕ ಸಿನಿಮಾಗಳಿವು