ಕನ್ನಡ ಚಿತ್ರರಂಗದ ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಇಬ್ಬರಿಗೂ ಇಂದು ಹುಟ್ಟುಹಬ್ಬದ ಸಡಗರ. ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ತಾರೆಯರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ. ಆದರೆ ಈ ಬಾರಿ ಬರ್ತ್ಡೇ ಆಚರಿಸಿಕೊಳ್ಳಲು ಅಭಿಷೇಕ್ ಹಾಗೂ ರಚಿತಾ ಒಲ್ಲೆ ಎಂದಿದ್ದಾರೆ. ಕನ್ನಡಿಗರು ಕಾವೇರಿಗಾಗಿ ಹೋರಾಟ ಮಾಡುತ್ತಿರುವಾಗ ತಾವು ಮಾತ್ರ ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಸರಿಯಲ್ಲ ಎಂಬುದು ಅವರ ಮಾತು.
ಪ್ರತಿ ವರ್ಷವೂ ಈ ನಟರು ತಮ್ಮ ಜನ್ಮದಿನವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುತ್ತಾರೆ. ಅಭಿಮಾನಿಗಳು ಮಧ್ಯರಾತ್ರಿಯೇ ಅವರ ಮನೆ ಮುಂದೆ ಕೇಕ್ ಹಿಡಿದುಕೊಂಡು ಜಮಾಯಿಸುತ್ತಾರೆ. ಕೇಕ್ ಕತ್ತರಿಸಿ, ಖುಷಿಯಿಂದ ತಮ್ಮ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡುತ್ತಾರೆ. ಆದರೆ, ಈ ಬಾರಿ ಇಂತಹ ಆಚರಣೆಗೆ ಬ್ರೇಕ್ ಹಾಕಿದ್ದಾರೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟರು ತಮ್ಮ ಬರ್ತ್ಡೇ ಬಗ್ಗೆ ಅಪ್ಡೇಟ್ಸ್ ನೀಡಿದ್ದಾರೆ.
"ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ಈ ವರ್ಷ (ಅಕ್ಟೋಬರ್ 3) ನನ್ನ ಜನ್ಮದಿನವನ್ನು ಆಚರಿಸುವುದು ಸೂಕ್ತವಲ್ಲ ಎನಿಸುತ್ತಿದೆ. ನಾನು ಮನೆಯಲ್ಲಿ ಇರುವುದಿಲ್ಲವಾದ್ದರಿಂದ ನನ್ನ ಅಭಿಮಾನಿಗಳು ನನ್ನ ಮನೆಯ ಹತ್ತಿರ ಬರಬೇಡಿ ಎಂದು ದಯೆಯಿಂದ ವಿನಂತಿಸುತ್ತೇನೆ. ನಿಮ್ಮ ಪ್ರೀತಿ ಮತ್ತು ಅಭಿಮಾನ ನನ್ನೊಂದಿಗೆ ಸದಾ ಇರಲಿ" - ನಟಿ ರಚಿತಾ ರಾಮ್
"ಕೆಲವೇ ದಿನಗಳಲ್ಲಿ ನನ್ನ ಹುಟ್ಟುಹಬ್ಬ ಇರುವುದರಿಂದ ಕೆಲವೊಂದು ವಿಷಯಗಳನ್ನು ತಿಳಿಸಲು ಇಚ್ಛಿಸುತ್ತೇನೆ. ಈ ವರ್ಷ ನಮ್ಮ ರಾಜ್ಯದಲ್ಲಿ ಬರಗಾಲ ಉಂಟಾಗಿರುವುದರಿಂದ ಹಾಗೂ ನಮ್ಮ ಕಾವೇರಿಗಾಗಿ ಹಲವಾರು ಜನರು ಹೋರಾಟ ಮಾಡುತ್ತಿರುವುದರಿಂದ ಈ ವರ್ಷ ನಾನು ನನ್ನ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳಲು ಇಚ್ಛಿಸಿದ್ದೇನೆ. ಎಲ್ಲಾ ರೆಬೆಲ್ ಅಭಿಮಾನಿಗಳು ನಿಮ್ಮ ಊರುಗಳಲ್ಲಿಯೇ, ನೀವು ಇರುವಲ್ಲಿಯೇ ನನಗೆ ಶುಭಹಾರೈಸಿ, ಆಶೀರ್ವದಿಸಿ. ಅಭಿಮಾನಿಗಳು ಪ್ರೀತಿಯಿಂದ ಮನೆ ಹತ್ತಿರ ಬಂದರೂ ಬರಬೇಡಿ ಅನ್ನುವುದು ನಮ್ಮ ಸಂಪ್ರದಾಯವಲ್ಲ. ಆದರೆ, ಬಂದವರು ಯಾವುದೇ ಹಾರ, ಕೇಕ್, ಪಟಾಕಿಗಳನ್ನು ಹಾಗೂ ಉಡುಗೊರೆಗಳನ್ನು ತರದೆ ಬಂದು ಶುಭ ಹಾರೈಸಿ. - ನಟ ಅಭಿಷೇಕ್ ಅಂಬರೀಶ್
ಅಭಿಷೇಕ್ ಅಂಬರೀಶ್ಗೆ ಇದು 30ನೇ ವರ್ಷದ ಹುಟ್ಟುಹಬ್ಬ. ಅಕ್ಟೋಬರ್ 3, 1993 ರಂದು ಜನಿಸಿದ ಅಭಿಷೇಕ್ 'ಯಂಗ್ ರೆಬಲ್ ಸ್ಟಾರ್' ಎಂದೇ ಫೇಮಸ್. 'ಅಮರ್' ಚಿತ್ರದ ಮೂಲಕ ತಮ್ಮ ಸಿನಿ ಜರ್ನಿ ಶುರು ಮಾಡಿದರು. ಸದ್ಯ 'ಬ್ಯಾಡ್ ಮ್ಯಾನರ್ಸ್' ಸಿನಿಮಾವಾಗಿ ಬ್ಯುಸಿಯಾಗಿದ್ದಾರೆ. ಚಿತ್ರವನ್ನು ಸುಕ್ಕಾ ಸೂರಿ ನಿರ್ದೇಶಿಸುತ್ತಿದ್ದಾರೆ. ಇದರ ಜೊತೆ ಅಭಿಷೇಕ್ 'ಕಾಳಿ' ಸಿನಿಮಾ ಮಾಡುತ್ತಿದ್ದಾರೆ. ಇವರ ವೈಯಕ್ತಿಕ ವಿಚಾರ ನೋಡುವುದಾದರೆ, ಇತ್ತೀಚೆಗೆ ಅವಿವಾ ಬಿದ್ದಪ್ಪ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
1992ರ ಅಕ್ಟೋಬರ್ 3ರಂದು ಜನಿಸಿದ ರಚಿತಾ ರಾಮ್ ಅವರಿಗೆ ಇದು 31ನೇ ವರ್ಷದ ಹುಟ್ಟುಹಬ್ಬ. 'ಅರಸಿ' ಧಾರಾವಾಹಿಯ ಮೂಲಕ ಹೆಸರು ಗಳಿಸಿದ ರಚಿತಾ ರಾಮ್, ನಂತರ ದರ್ಶನ್ ಜೊತೆ 'ಬುಲ್ ಬುಲ್' ಚಿತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದರು. ಇದಾದ ಬಳಿಕ 'ದಿಲ್ ರಂಗೀಲಾ', 'ರನ್ನ' 'ರಥಾವರ', 'ಚಕ್ರವ್ಯೂಹ', 'ಲವ್ ಯೂ ರಚ್ಚು', 'ಕ್ರಾಂತಿ' ಮುಂತಾದ ಹಲವು ಚಿತ್ರಗಳಲ್ಲಿ ಅಭಿನಯಿಸಿ ಅಭಿಮಾನಗಳ ಮನಸ್ಸು ಗೆದ್ದಿದ್ದಾರೆ. ಇದಲ್ಲದೇ ಕನ್ನಡದ ರಿಯಾಲಿಟಿ ಶೋ 'ಕಾಮಿಡಿ ಟಾಕೀಸ್', 'ಮಜಾಭಾರತ- 2', 'ಸೂಪರ್ ಕ್ವೀನ್' ಮಾತ್ರವಲ್ಲದೇ ಸದ್ಯ 'ಭರ್ಜರಿ ಬ್ಯಾಚುಲರ್ಸ್' ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಇವರ ಕೈಯಲ್ಲಿ ಕೆಲವು ಸಿನಿಮಾಗಳಿವೆ.
ಇದನ್ನೂ ಓದಿ:ಅಭಿಮಾನಿಗಳು ಮನೆ ಹತ್ತಿರ ಬಂದ್ರೂ, ಬರಬೇಡಿ ಅನ್ನುವುದು ನಮ್ಮ ಸಂಪ್ರದಾಯವಲ್ಲ: ಅಭಿಷೇಕ್ ಅಂಬರೀಶ್ ಹೀಗಂದಿದ್ಯಾಕೆ?