ಒಂದರ ಮೇಲೊಂದರಂತೆ ಹೊರಬರುತ್ತಿರುವ ಮಣಿಪುರದ ಘಟನಾವಳಿಗಳು ದೇಶವನ್ನೇ ಬೆಚ್ಚಿಬೀಳಿಸುತ್ತಿವೆ. ಇತ್ತೀಚೆಗೆ ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ, ಮೆರವಣಿಗೆ ಮಾಡಿದ ಅತ್ಯಂತ ನಾಚಿಕೆಗೇಡಿನ ಘಟನೆ ಭಾರಿ ಸಂಚಲನ ಮೂಡಿಸಿತ್ತು. ದುರುಳರ ದುಷ್ಕೃತ್ಯಕ್ಕೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಪ್ರಕರಣದ ಪೊಲೀಸ್ ತನಿಖೆ ಚುರುಕುಗೊಂಡಿದೆ, ಈಗಾಗಲೇ ಹಲವರನ್ನು ಬಂಧಿಸಲಾಗಿದ್ದು, ವಿಚಾರಣೆ ಸಾಗುತ್ತಿದೆ. ಅಮಾನವೀಯ ಘಟನೆಯನ್ನು ಖಂಡಿಸಿದವರಲ್ಲಿ ಕಾಶ್ಮೀರಿ ಫೈಲ್ಸ್ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೂಡಾ ಒಬ್ಬರು.
ವಿವೇಕ್ ಅಗ್ನಿಹೋತ್ರಿ ದೊಡ್ಡ ಟಿಪ್ಪಣಿಯೊಂದಿಗೆ ಟ್ವಿಟರ್ನಲ್ಲಿ ಮಣಿಪುರ ಕೃತ್ಯಕ್ಕೆ ಖಂಡನೆ ವ್ಯಕ್ತಪಡಿಸಿದ್ದರು. ರಾಜ್ಯದ ಮಹಿಳೆಯರಲ್ಲಿ ಕ್ಷಮೆ ಯಾಚಿಸಿದ್ದರು. ಬಳಿಕ ಅವರ ಸೂಪರ್ ಹಿಟ್ ಸಿನಿಮಾ ಕಾಶ್ಮೀರಿ ಫೈಲ್ಸ್ ಬಗ್ಗೆ ಟ್ವೀಟ್ ಮಾಡಿಕೊಳ್ಳುತ್ತಿದ್ದರು. ಈ ವೇಳೆ ನೆಟ್ಟಿಗರೊಂದಿಗೆ ಟ್ವೀಟ್, ರಿಟ್ವೀಟ್ ನಡೆದಿದೆ. ಇದೇ ಸಂದರ್ಭದಲ್ಲಿ 'ಮಣಿಪುರ ಫೈಲ್ಸ್' ಸಿನಿಮಾ ಮಾಡುವಂತೆ ನಿರ್ದೇಶಕರಿಗೆ ನೇರ ಸವಾಲು ಬಂದಿದೆ.
ನಿರ್ದೇಶಕರಿಗೆ ನೆಟ್ಟಿಗರ ಸವಾಲು: ವಿವೇಕ್ ಅಗ್ನಿಹೋತ್ರಿ ಅವರಿಗೆ ನೆಟ್ಟಿಗರೋರ್ವರು, 'ಸಮಯ ವ್ಯರ್ಥ ಮಾಡಬೇಡಿ, ತಾಕತ್ತಿದ್ದರೆ ಮಣಿಪುರ ಫೈಲ್ಸ್ ಸಿನಿಮಾ ಮಾಡಿ' (Don't waste time go and make a movie 'Manipur Files' if you are man enough) ಎಂದು ಸವಾಲು ಹಾಕಿದ್ದಾರೆ.
ಅಗ್ನಿಹೋತ್ರಿ ಹೇಳಿದ್ದೇನು?: ಇದಕ್ಕೆ ನಿರ್ದೇಶಕರೂ ಕೂಡ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ. ''ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕೆ ಧನ್ಯವಾದಗಳು. ಆದರೆ ಎಲ್ಲ ಸಿನಿಮಾಗಳನ್ನು ನನ್ನಿಂದನೇ ಮಾಡಿಸುತ್ತೀರಾ? ನಿಮ್ಮ 'ಟೀಮ್ ಇಂಡಿಯಾ'ದಲ್ಲಿ 'ಮ್ಯಾನ್' ಫಿಲ್ಮ್ಮೇಕರ್' ಇಲ್ಲವೇ?'' ಎಂದು ಕೇಳಿದ್ದಾರೆ.