1998ರಲ್ಲಿ ಕನ್ನಡ ಚಿತ್ರರಂಗದಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿ ಮೈಲಿಗಲ್ಲು ಸಾಧಿಸಿದ ಚಿತ್ರ 'ಎ' ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ಹಾಗು ಅಭಿನಯಿಸಿದ ಚೊಚ್ಚಲ ಸಿನಿಮಾ 'ಎ'. ಕೆಲವು ದಿನಗಳ ಹಿಂದೆ ಈ ಸಿನಿಮಾ ಬಿಡುಗಡೆ ಆಗಿ ಬರೋಬ್ಬರಿ 25 ವರ್ಷ ಆಗಿತ್ತು. ರಿಯಲ್ ಸ್ಟಾರ್ ಸಿದ್ಧ ಸೂತ್ರಗಳನ್ನು ಬದಿಗಿಟ್ಟು ತಮ್ಮದೇ ನಿಜ ಜೀವನದ ಕಥೆಯನ್ನು ತೆರೆಗೆ ತಂದು ಉಪೇಂದ್ರ ಸಕ್ಸಸ್ ಕಂಡಿದ್ದರು. ಕಡ್ಡಾಯವಾಗಿ ಬುದ್ಧಿವಂತರಿಗೆ ಮಾತ್ರ ಅಂತಾ ಟ್ಯಾಗ್ ಲೈನ್ ಇಟ್ಟು ಸಿನಿಮಾ ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿದ್ದರು. ಸದ್ಯ ರಿಯಲ್ ಸ್ಟಾರ್ ಉಪೇಂದ್ರ 'ಯುಐ' ಚಿತ್ರತಂಡದೊಂದಿಗೆ ಕೇಕ್ ಕಟ್ ಮಾಡುವ ಮೂಲಕ ಮತ್ತೊಂದು ದಾಖಲೆ ಬರೆಯುವ ಸುಳಿವು ನೀಡಿದ್ದಾರೆ. ಅಷ್ಟಕ್ಕೂ ಉಪೇಂದ್ರ ಮತ್ತೆ ಯಾವ ದಾಖಲೆ ಬರೆಯಲು ರೆಡಿಯಾಗಿದ್ದಾರೆ ಅಂತಾ ತಿಳ್ಕೊಕ್ಕಿಂತ ಮುಂಚೆ 'ಎ' ಚಿತ್ರದ ಸಕ್ಸಸ್ಗೆ ಕಾರಣವಾದ ಕೆಲ ಇಂಟ್ರಸ್ಟ್ರಿಂಗ್ ವಿಚಾರಗಳನ್ನ ಹೇಳುತ್ತಿವಿ.
ಎ ಸಿನಿಮಾದ ಸಕ್ಸಸ್ ಸೀಕ್ರೇಟ್ ಏನು ಅಂತಾ ನೋಡಿದ್ರೆ ಸಾಕಷ್ಟು ಹೈಲೆಟ್ಸ್ಗಳಿವೆ. ತರ್ಲೆ ನನ್ಮಗ ಸಿನಿಮಾ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪರಿಚಿತರಾಗಿದ್ದ ಉಪೇಂದ್ರ ಮುಂದೆ 'ಶ್', ಓಂ ರೀತಿಯ ಹಿಟ್ ಸಿನಿಮಾಗಳನ್ನು ಕೊಟ್ಟು ಸಕ್ಸಸ್ ಕಂಡಿದ್ದರು. ಬಳಿಕ 'ಆಪರೇಷನ್ ಅಂತ', 'ಸ್ವಸ್ತಿಕ್' ರೀತಿಯ ವಿಭಿನ್ನ ಕಾನ್ಸೆಪ್ಟ್ ಸಿನಿಮಾಗಳಿಂದ ಗಮನ ಸೆಳೆದಿದ್ದರು. ನಿರ್ದೇಶಕನಾಗಿ ಒಳ್ಳೆ ಸ್ಟಾರ್‌ಡಮ್ ಸಂಪಾದಿಸಿದ್ದ ಉಪೇಂದ್ರ ಹೀರೊ ಆಗಲು 'ಎ' ಸಿನಿಮಾ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಬಹುತೇಕ ಹೊಸಬರೇ ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದರು. ಉಪೇಂದ್ರ ತಮ್ಮ ವಿಭಿನ್ನ ಕಥೆ ಹಾಗೂ ಸ್ಕ್ರೀನ್‌ಪ್ಲೇ ಯಿಂದ ಸಕ್ಸಸ್ ಕಂಡಿದ್ದರು.
ನಿರ್ದೇಶಕರಾಗಿದ್ದ ಉಪೇಂದ್ರ ಹೀರೊ ಆಗಬೇಕು ಎಂದುಕೊಂಡಾಗ ಚಿತ್ರದಲ್ಲೂ ಒಬ್ಬ ಸಿನಿಮಾ ನಿರ್ದೇಶಕನ ಕಥೆ ಹೇಳಿದ್ದರು. ಸಿನಿಮಾದೊಳಗೊಂದು ಸಿನಿಮಾ ಕಥೆಯನ್ನ ಹೇಳಿದ್ದರು. ಜೀವನದಲ್ಲಿ ಏಳುಬೀಳು ಕಂಡ ಸೂರ್ಯ, ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದ ಹುಡುಗಿ, ಪ್ರೀತಿಯ ಬಗ್ಗೆ ಸೂರ್ಯನಿಗೆ ಪಾಠ ಮಾಡಲು ಬರ್ತಾಳೆ. ಇವರಿಬ್ಬರ ಜಗಳ ಹಾಗು ಅಹಂ ಕಥೆಗೆ ಉಪ್ಪಿ ಇಟ್ಟ ಹೆಸರು 'ಎ'.
ಆರಂಭದಲ್ಲೇ ಸಿನಿಮಾದ ಎಂಡ್ ಕಾರ್ಡ್ : 'ಎ' ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದ ಸಿನಿಮಾ ಎಂದರೂ ತಪ್ಪಾಗಲ್ಲ. ಶಿವರಾಜ್ ಕುಮಾರ್ ಅಥವಾ ಬೇರೆ ಯಾರಿಗಾದರೂ ನಿರ್ದೇಶನ ಮಾಡಬೇಕು ಎಂದು ಉಪೇಂದ್ರ ಈ ಕಥೆ ಮಾಡಿಕೊಂಡಿದ್ದರು. ಆದರೆ ಚಿತ್ರದ ನಿರ್ಮಾಪಕರು ನೀವೇ ಹೀರೊ ಆಗಿ ಎಂದಾಗ ಉಪೇಂದ್ರ ಧೈರ್ಯ ಮಾಡಿದ್ದರು. ಹೀರೊ ಇಮೇಜ್ ಬಿಟ್ಟು ಸ್ಕ್ರೀನ್‌ಪ್ಲೇ ಮೂಲಕ ಗೆಲ್ಲುವ ಪ್ರಯತ್ನ ಮಾಡಿದ್ದರು. 'ಐಯಾಮ್ ಗಾಡ್ ಗಾಡ್ ಈಸ್ ಗ್ರೇಟ್' ಎನ್ನುತ್ತಾ ನಾಯಕ ಸೂರ್ಯ ಆರಂಭದಲ್ಲೇ ಗನ್ ಹಿಡ್ದು ಎಲ್ಲರನ್ನು ಹೆದರಿಸುವುದು, ದೇವಸ್ಥಾನದಲ್ಲಿ ದೇವರಿಗೆ ಎದುರು ಗನ್ ಹಿಡ್ದು ವಾದಕ್ಕೆ ಇಳಿಯುವುದು, ಗಣೇಶನನ್ನು ಬಾವಿಗೆ ಎತ್ತಿ ಹಾಕುವುದು, ಸಿನಿಮಾ ಆರಂಭದಲ್ಲೇ ಸಿನಿಮಾದ ಎಂಡ್ ಕಾರ್ಡ್ ಹಾಕಿದ್ದು, ಹೀಗೆ ಎಲ್ಲವೂ ವಿಭಿನ್ನ ಎನ್ನಿಸಿತ್ತು. ಸಿನಿಮಾ ಪೋಸ್ಟರ್‌ಗಳನ್ನು ಕೂಡ ವಿಭಿನ್ನವಾಗಿ ಡಿಸೈನ್ ಮಾಡಲಾಗಿತ್ತು.
ಕಥೆ ಅರ್ಥವಾಗದೇ ಪದೇ ಪದೇ ಸಿನಿಮಾ ನೋಡಿದ್ದರು: ರಿವರ್ಸ್ ಸ್ಕ್ರೀನ್‌ಪ್ಲೇ ಕಾನ್ಸೆಪ್ಟ್‌ನಲ್ಲಿ ಉಪೇಂದ್ರ 'ಎ' ಸಿನಿಮಾ ಕತೆ ಹೇಳಿದ್ದರು. ಹಲವು ಫ್ಲಾಶ್‌ಬ್ಯಾಕ್‌ಗಳಲ್ಲಿ ಸಿನಿಮಾ ಕಥೆಯನ್ನು ನಿರೂಪಿಸಿದ್ದರು. ಕನ್ನಡದ ಮಟ್ಟಿಗೆ ರೊಮ್ಯಾಂಟಿಕ್ ಸೈಕಲಾಜಿಕಲ್ ಥ್ರಿಲ್ಲರ್ ಎನ್ನುವ ವಿಭಿನ್ನ ಜಾನರ್ ಸಿನಿಮಾ ಅದಾಗಿತ್ತು. ಇನ್ನು ಬಣ್ಣದಲೋಕದ ಕಾಸ್ಟಿಂಗ್ ಕೌಚ್ ಕರಾಳ ಮುಖದ ಬಗ್ಗೆಯೂ ಚಿತ್ರದಲ್ಲಿ ಚರ್ಚಿಸಲಾಗಿತ್ತು. ಬಹಳ ರಿಯಲಿಸ್ಟಿಕ್ ಆಗಿ ಚಿತ್ರವನ್ನು ಉಪೇಂದ್ರ ಹೇಳುವ ಪ್ರಯತ್ನ ಮಾಡಿದ್ದರು. ರಿವರ್ಸ್ ಸ್ಕ್ರೀನ್‌ಪ್ಲೇ ಕಾರಣಕ್ಕೆ ಕಥೆ ಅರ್ಥವಾಗದೇ ಕೆಲವರು ಪದೇ ಪದೇ ಸಿನಿಮಾ ನೋಡಿದರು. 2007ರಲ್ಲಿ 'ಎ' ಸಿನಿಮಾ ತಮಿಳಿಗೂ ರೀಮೆಕ್ ಆಗಿತ್ತು.