ಹಲವು ಏರಿಳಿತಗಳ ನಡುವೆ ತಮ್ಮ ಅಮೋಘ ಅಭಿನಯದಿಂದ ಸಿನಿಪ್ರಿಯರನ್ನು ರಂಜಿಸಿರುವ ಕನ್ನಡ ಚಿತ್ರರಂಗದ ಪ್ಯಾನ್ ಇಂಡಿಯಾ ಸ್ಟಾರ್ ಕಿಚ್ಚ ಸುದೀಪ್. ತಮ್ಮ ಅತ್ಯದ್ಭುತ ನಟನೆ ಮೂಲಕ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿದ್ದಾರೆ ಅಭಿನಯ ಚಕ್ರವರ್ತಿ. ಸಿನಿ ವೃತ್ತಿಜೀವನದಲ್ಲಿ ಈಗಾಗಲೇ 25 ವರ್ಷಗಳನ್ನು ಪೂರೈಸಿರುವ ಕಿಚ್ಚ ಸುದೀಪ್ ಏಳು ಬೀಳುಗಳನ್ನು ಮೆಟ್ಟಿ ನಿಂತಿರುವ ಶ್ರೇಷ್ಠ ನಟ. ಸ್ಟಾರ್ ನಟರ ಸಿನಿ ಜೀವನದಲ್ಲಿ ಒಂದೊಂದು ಸಿನಿಮಾಗಳು ಕೂಡ ಅದರದ್ದೇ ಆದ ಮಹತ್ವ ಹೊಂದಿರುತ್ತದೆ. ಸುದೀಪ್ ಸಿನಿ ಕೆರಿಯರ್ನಲ್ಲೂ ಹಲವು ಸಿನಿಮಾಗಳು ಅವರಿಗೆ ಒಳ್ಳೆ ಹೆಸರು ತಂದುಕೊಟ್ಟಿದೆ.
17 ವರ್ಷ ಪೂರೈಸಿದ 'ಮೈ ಆಟೋಗ್ರಾಫ್': ಸುದೀಪ್ ಸಿನಿ ಜರ್ನಿಯಲ್ಲಿ ಅಚ್ಚಳಿಯದಂತಹ ಸಿನಿಮಾಗಳ ಪೈಕಿ 'ಮೈ ಆಟೋಗ್ರಾಫ್' ಕೂಡ ಒಂದು. ಈ ಚಿತ್ರವನ್ನು ಸುದೀಪ್ ಅವರೇ ನಿರ್ದೇಶಿಸಿ ನಟನೆ ಕೂಡ ಮಾಡಿದ್ದರು. 2006ರಲ್ಲಿ ತೆರೆ ಕಂಡ ಈ ಸಿನಿಮಾ ಇಂದಿಗೆ ನಿನ್ನೆಗೆ 17 ವರ್ಷ ಪೂರೈಸಿದೆ.
ನಟ ಸುದೀಪ್ ಟ್ವೀಟ್: ನಿರ್ದೇಶಕನಾಗಿ 17 ವರ್ಷಗಳು, ಚಿತ್ರ ತಯಾರಕರ ಕುರ್ಚಿಯಲ್ಲಿರುವುದು ಎಂದಿಗೂ ಅದ್ಭುತ ಭಾವನೆ. ನನ್ನ ಬೆಂಬಲಕ್ಕೆ ನಿಂತ ಪ್ರತಿಯೊಬ್ಬ ನಟ, ತಂತ್ರಜ್ಞ, ನಿರ್ಮಾಣ ತಂಡ, ಸಿಬ್ಬಂದಿ ಮತ್ತು ಸೆಟ್‌ನಲ್ಲಿದ್ದ ಎಲ್ಲರಿಗೂ ನನ್ನ ಧನ್ಯವಾದ ಎಂದು ಸೋಶಿಯಲ್ ಮೀಡಿಯಾದಲ್ಲಿ ನಟ ಸುದೀಪ್ ಬರೆದುಕೊಂಡಿದ್ದಾರೆ.
ನಿರ್ದೇಶಕನಾಗಿ ನಟ ಸುದೀಪ್:ಕೆಲ ಸಿನಿಮಾಗಳಲ್ಲಿ ಅಭಿನಯಿಸಿದ ಸುದೀಪ್ ನಟ ಮಾತ್ರವಲ್ಲದೇ ನಿರ್ದೇಶಕನಾಗಿಯೂ ಗುರುತಿಸಿಕೊಂಡರು. 2006ರಲ್ಲಿ 'ಮೈ ಆಟೋಗ್ರಾಫ್' ಸಿನಿಮಾ ಮೂಲಕ ನಿರ್ದೇಶಕನಾಗಿ ಹೊರಹೊಮ್ಮಿದರು. 'ಮೈ ಆಟೋಗ್ರಾಫ್ ಚಿತ್ರದ ಮೂಲಕ ನಟ, ನಿರ್ದೇಶಕ ಹಾಗೂ ಪ್ರೊಡ್ಯೂಸರ್ ಆಗಿ ಗುರುತಿಸಿಕೊಂಡರು. ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಮೂಲಕ ಸುದೀಪ್ ಅವರೇ ಈ ಸಿನಿಮಾವನ್ನು ನಿರ್ಮಿಸಿದ್ದರು. 2006ರಲ್ಲಿಯೇ ಸುಮಾರು 2 ಕೋಟಿ ರೂಪಾಯಿ ಬಜೆಟ್ನಲ್ಲಿ ತಯಾರಾದ 'ಮೈ ಆಟೋಗ್ರಾಫ್' 6 ಕೋಟಿ ರೂಪಾಯಿ ಲಾಭ ಮಾಡಿತು.