ಕರ್ನಾಟಕ

karnataka

ETV Bharat / elections

ಕಾಂಗ್ರೆಸ್​ ಅತೃಪ್ತರಿಂದ ಪತನವಾಗುತ್ತಾ ಮೈತ್ರಿ ಸರ್ಕಾರ!? - kannada news

ರಾಜ್ಯ ಕಾಂಗ್ರೆಸ್ ನಾಯಕರುಗಳ ನಡುವಿನ ಗುಂಪುಗಾರಿಕೆ ಮೈತ್ರಿ ಸರ್ಕಾರಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆಗಳಿವೆ. ಮೂಲ ಕಾಂಗ್ರೆಸಿಗರ ಪೈಕಿ ಬಹಳಷ್ಟು ಮಂದಿಗೆ ಪಕ್ಷದ ಮೇಲೆ ಹಿಡಿತ ಇಲ್ಲದಂತಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಮೈತ್ರಿ ಸರ್ಕಾರ

By

Published : May 4, 2019, 9:15 PM IST

ಬೆಂಗಳೂರು:ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮೈತ್ರಿ ಧರ್ಮಪಾಲನೆ ಆಗಿದೆಯಾ ಎಂಬ ಪ್ರಶ್ನೆ ಮೈತ್ರಿ ಪಕ್ಷಗಳ ನಾಯಕರಿಗೆ ಕಾಡುತ್ತಿರುವುದರ ಜೊತೆಗೆ ಬಂಡಾಯದ ಬಾವುಟ ಹಿಡಿದಿರುವ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಇತರರ ಜತೆಗಿನ ಸಂಧಾನದ ನಿರಾಸಕ್ತಿ ಮತ್ತು ಮಂಡ್ಯ ಜಿಲ್ಲೆಯ ಕಾಂಗ್ರೆಸ್ ನಾಯಕರ ರಹಸ್ಯ ಸಭೆಗಳಿಗೆ ಪರೋಕ್ಷ ಕುಮ್ಮಕ್ಕು ನೀಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಮೈತ್ರಿ ಸರ್ಕಾರದ ಪತನದ ಕುರಿತ ಚರ್ಚೆಗಳು ರಾಜಕೀಯ ವಲಯದಲ್ಲಿ ಹೆಚ್ಚಾಗುತ್ತಿವೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ 38 ಸ್ಥಾನ ಗಳಿಸಿದ್ದ ಜೆಡಿಎಸ್​ಗೆ ಕಾಂಗ್ರೆಸ್ ಹೈಕಮಾಂಡ್ ಲೋಕಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿತ್ತು. ನಿಗಮ ಮಂಡಳಿ ನೇಮಕಾತಿ, ಸಂಪುಟ ವಿಸ್ತರಣೆ ಸೇರಿದಂತೆ ಎಲ್ಲ ವಿಷಯದಲ್ಲೂ ಜೆಡಿಎಸ್​ಗೆ ಮಣೆ ಹಾಕುವುದು ಅನಿವಾರ್ಯವಾಗಿತ್ತು. ಇದು ಜೆಡಿಎಸ್ ಜತೆ ಜಿದ್ದಾಜಿದ್ದಿನ ರಾಜಕೀಯ ಮಾಡಿಕೊಂಡು ಬಂದಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರ ವಲಸಿಗ ಕಾಂಗ್ರೆಸಿಗರಿಗೆ ನುಂಗಲಾರದ ತುತ್ತಾಗಿತ್ತು.

ಲೋಕಸಭೆ ಚುನಾವಣೆವರೆಗೂ ಎಲ್ಲವನ್ನು ಸಹಿಸಿಕೊಳ್ಳಬೇಕು ಎಂದು ಹೈಕಮಾಂಡ್ ಸೂಚನೆ ನೀಡಿದ್ದರಿಂದ ಸದ್ದಿಲ್ಲದೆ ಕೆಲಸ ಮಾಡುತ್ತಿದ್ದರು. ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ನಿಧಾನವಾಗಿ ಗರಿ ಬಿಚ್ಚಲಾರಂಭಿಸಿವೆ. ಈ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಅತೃಪತ್ತರು, ಬಂಡಾಯಗಾರರ ಮೇಲೆ ಕಠಿಣ ಕ್ರಮ ಜರುಗಿಸಬೇಕಾದ ಕಾಂಗ್ರೆಸ್ ನಾಯಕರೇ ಜಾಣ ಮೌನಕ್ಕೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಜೆಡಿಎಸ್ ಜೊತೆ ಹಳೆ ಮೈಸೂರು ಭಾಗದಲ್ಲಿ ಸೆಟೆದು ನಿಂತಿರುವ ಮಾಜಿ ಸಚಿವ ಚೆಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಶಾಸಕ ಬಾಲಕೃಷ್ಣ ಸೇರಿದಂತೆ ಹಲವರು ಕಾಂಗ್ರೆಸ್ ಪಕ್ಷಕ್ಕೆ ಅನಿವಾರ್ಯವಾಗಿದ್ದಾರೆ. ಒಂದು ವೇಳೆ ಅವರ ವಿರುದ್ಧ ಕ್ರಮ ಕೈಗೊಂಡರೆ ಹಳೆ ಮೈಸೂರು ಭಾಗದಲ್ಲಿ ಪಕ್ಷ ದುರ್ಬಲಗೊಳ್ಳುತ್ತದೆ ಎಂದು ಸಬೂಬು ನೀಡಿ ರಹಸ್ಯ ಸಭೆಯಲ್ಲಿ ಪಾಲ್ಗೊಂಡಿದ್ದರೂ ಸಹಿಸಿಕೊಳ್ಳಬೇಕಾದ ಇಕ್ಕಟ್ಟಿನ ಪರಿಸ್ಥಿತಿಯನ್ನು ರಾಜ್ಯ ನಾಯಕರು ತಂದಿಟ್ಟಿದ್ದಾರೆ ಎನ್ನುವ ಮಾತುಗಳು ಕೂಡಾ ಕೇಳಿ ಬರುತ್ತಿವೆ.

ಇನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಶಾಸಕರಾದ ಮಹೇಶ್ ಕುಮಟಹಳ್ಳಿ, ನಾಗೇಂದ್ರ, ಕಂಪ್ಲಿ ಗಣೇಶ್, ಪ್ರತಾಪ್​ಗೌಡ ಪಾಟೀಲ್ ಮತ್ತಿರರು ಪಕ್ಷದ ವಿರುದ್ಧ ಅಸಮಾಧಾನಗೊಂಡು ಬಿಜೆಪಿಯ ಸಂಪರ್ಕದಲ್ಲಿದ್ದರೂ ಅವರ ಜತೆ ಮಾತುಕತೆ ನಡೆಸಿ ಸಮಾಧಾನ ಪಡಿಸುವ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಮೈತ್ರಿ ಸರ್ಕಾರ ಸುಭದ್ರವಾಗಿದೆ ಎಂದು ಮೇಲ್ನೋಟಕ್ಕೆ ಎಲ್ಲ ನಾಯಕರು ಹೇಳಿಕೆ ನೀಡುತ್ತಲೇ ಇದ್ದಾರೆ. ಆದರೆ ಒಳಗೊಳಗೆ ವಾತಾವರಣವನ್ನು ಹದಗೆಡಿಸುವ ಬೆಳವಣಿಗೆಗಳು ನಡೆಯುತ್ತಲೇ ಇವೆ ಎನ್ನಲಾಗಿದೆ.

ರಾಜ್ಯ ಕಾಂಗ್ರೆಸ್ ನಾಯಕರುಗಳ ನಡುವಿನ ಗುಂಪುಗಾರಿಕೆ ಮೈತ್ರಿ ಸರ್ಕಾರಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆಗಳಿವೆ. ಮೂಲ ಕಾಂಗ್ರೆಸಿಗರ ಪೈಕಿ ಬಹಳಷ್ಟು ಮಂದಿಗೆ ಪಕ್ಷದ ಮೇಲೆ ಹಿಡಿತ ಇಲ್ಲದಂತಾಗಿದೆ. ಇತ್ತೀಚೆಗೆ ಕಾಂಗ್ರೆಸ್​ಗೆ ಬಂದವರು ಪಕ್ಷದ ಸಂಘಟನೆ ಮೇಲೆ ಬಲವಾದ ಹಿಡಿತ ಸಾಧಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಇದುವರೆಗೂ ಪ್ರಭಾವಿ ನಾಯಕರು ಎಂಬ ಕಾರಣಕ್ಕಾಗಿ ವಲಸಿಗರ ಮಾತುಗಳಿಗೆ ಹೆಚ್ಚಿನ ಮನ್ನಣೆ ನೀಡುತ್ತಾ ಬಂದಿದೆ.

ಮೂಲ ಕಾಂಗ್ರೆಸಿಗರು ಪಕ್ಷ ಹೇಳಿದಂತೆ ತಮ್ಮ ಪಾಡಿಗೆ ತಾವು ಕಾಲ ಕಳೆಯುತ್ತಿದ್ದಾರೆ. ಆದರೆ ವಲಸಿಗ ನಾಯಕರು ತಮ್ಮ ಅಸ್ತಿತ್ವಕ್ಕಾಗಿ ಪದೇ ಪದೇ ಒಂದಲ್ಲ ಒಂದು ರೀತಿ ಚಟುವಟಿಕೆ ನಡೆಸುತ್ತಿರುವುದರಿಂದ ಮೈತ್ರಿ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ ಎನ್ನಲಾಗುತ್ತಿದೆ. ಎಲ್ಲದಕ್ಕೂ ಲೋಕಸಭೆ ಚುನಾವಣಾ ಫಲಿತಾಂಶದ ನಂತರ ಉತ್ತರ ಸಿಗಲಿದೆ.

ABOUT THE AUTHOR

...view details