ಪಂಜಾಬ್ (ಪಾಕಿಸ್ತಾನ):ಮಗಳು ತನ್ನ ಇಚ್ಛೆಗೆ ವಿರುದ್ಧವಾಗಿ ಪ್ರೇಮ ವಿವಾಹವಾಗಿದ್ದಕ್ಕೆ ಕೋಪಗೊಂಡ ತಂದೆ ಮನೆಗೆ ಬೆಂಕಿ ಇಟ್ಟಿದ್ದು, ಹಸುಗೂಸು ಸೇರಿ ಒಂದೇ ಕುಟುಂಬದ ಏಳು ಮಂದಿ ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ಪೂರ್ವ ಪಂಜಾಬ್ ಪ್ರಾಂತ್ಯದ ಮುಜಾಫರ್ಘರ್ ಜಿಲ್ಲೆಯಲ್ಲಿ ಮೊನ್ನೆ ಭಾನುವಾರ ಪಾಪಿ ತಂದೆ ಈ ದುಷ್ಕೃತ್ಯವೆಸಗಿದ್ದಾನೆ. ಓರ್ವ ಪುರುಷ, ಇಬ್ಬರು ಮಹಿಳೆಯರು, 10-12 ವರ್ಷ ನಡುವಿನ ಮೂವರು ಬಾಲಕರು ಹಾಗೂ ನಾಲ್ಕು ತಿಂಗಳ ಹಸುಗೂಸು ಬೆಂಕಿಯಲ್ಲಿ ಸಿಲುಕಿ ಪ್ರಾಣಬಿಟ್ಟಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಮನೆಯ ಯಜಮಾನನೇ ಆರೋಪಿ ಎಂಬುದು ತಿಳಿದು ಬಂದಿದೆ. ಆರೋಪಿ ಮಂಜೂರ್ ಹುಸೇನ್ಗೆ ಇಬ್ಬರು ಫೌಜಿಯಾ ಬೀಬಿ ಮತ್ತು ಖುರ್ಷಿದ್ ಮೈ ಎಂಬ ಪುತ್ರಿಯರಿದ್ದು, ಇವರಿಬ್ಬರೂ ಮದುವೆ ಬಳಿಕ ಒಂದೇ ಮನೆಯಲ್ಲಿ ವಾಸವಾಗಿದ್ದರು.