ಕರ್ನಾಟಕ

karnataka

ಪೊಲೀಸರ ಹೆಸರಿನಲ್ಲಿ ಯುವಕ-ಯುವತಿಯನ್ನು ಸುಲಿಗೆ ಮಾಡಿದ್ದ ಹೋಮ್ ಗಾರ್ಡ್ ಬಂಧನ

By

Published : Jan 31, 2023, 3:39 PM IST

ಪೊಲೀಸ್​ ಎಂದು ಬೆದರಿಸಿ ಪೇಟಿಎಂ ಮೂಲಕ ಒಂದು ಸಾವಿರ ಪಡೆದು ತೆರಳಿದ್ದ ಆರೋಪಿ - ಕುಂದಲಹಳ್ಳಿ ಲೇಕ್ ಬಳಿ ಕುಳಿತಿದ್ದ ಯುವಕ - ಯುವತಿಯಿಂದ ಸುಲಿಗೆ - ಆರೋಪಿಯನ್ನು ಬಂಧಿಸಿದ ಹೆಚ್​ಎಎಲ್​ ಠಾಣಾ ಪೊಲೀಸರು.

home-guard-arrested-for-extorting-youths-in-the-name-of-police
ಪೊಲೀಸರ ಹೆಸರಿನಲ್ಲಿ ಯುವಕ-ಯುವತಿಯಿಂದ ಸುಲಿಗೆ ಮಾಡಿದ್ದ ಹೋಮ್ ಗಾರ್ಡ್ ಬಂಧನ

ಬೆಂಗಳೂರು :ಆಡುಗೋಡಿ, ಸಂಪಿಗೆಹಳ್ಳಿ ವ್ಯಾಪ್ತಿಯಲ್ಲಿ ಸಾರ್ವಜನಿಕರಿಂದ ಪೊಲೀಸ್ ಸಿಬ್ಬಂದಿ ಹಣ ಸುಲಿಗೆ ಮಾಡಿದ್ದ ಪ್ರಕರಣ ಮಾಸುವ ಮುನ್ನವೇ ನಗರದಲ್ಲಿ ಅಂಥಹದ್ದೇ ಮತ್ತೊಂದು ಪ್ರಕರಣ ನಡೆದಿದೆ. ವಾಯು ವಿಹಾರಕ್ಕೆ ತೆರಳಿ ಕೆರೆ ಬಳಿ ಕುಳಿತಿದ್ದ ಯುವಕ - ಯುವತಿಯನ್ನು ಪೊಲೀಸ್ ಹೆಸರಿನಲ್ಲಿ ಬೆದರಿಸಿ ಸುಲಿಗೆ ಮಾಡಿದ್ದ ಗೃಹ ರಕ್ಷಕದಳದ ಸಿಬ್ಬಂದಿಯನ್ನ ಎಚ್ಎಎಲ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್ ರೆಡ್ಡಿ ಬಂಧಿತ ಆರೋಪಿ. ಜನವರಿ 29 ರಂದು ಕುಂದಲಹಳ್ಳಿ ಲೇಕ್ ಬಳಿ ಕುಳಿತಿದ್ದ ಯುವಕ ಮತ್ತು ಯುವತಿಯನ್ನ ಪೊಲೀಸ್ ಹೆಸರಿನಲ್ಲಿ ಬೆದರಿಸಿದ್ದ ಆರೋಪಿ ಒಂದು ಸಾವಿರ ರೂ. ಪಡೆದು ತೆರಳಿದ್ದರು.

ಜನವರಿ 29ರಂದು ಕುಂದಲಹಳ್ಳಿ ಲೇಕ್ ಬಳಿ ಕುಳಿತಿದ್ದಾಗ ಬಂದಿದ್ದ ಆರೋಪಿ, ತಾನು ಪೊಲೀಸ್ ಎಂದು ಪರಿಚಯಿಸಿಕೊಂಡು ಯುವತಿ ಹಾಗೂ ಆಕೆಯ ಗೆಳೆಯನ ಫೋಟೋ ಕ್ಲಿಕ್ಕಿಸಿದ್ದರು. ನಂತರ ಇಬ್ಬರ ವಿಳಾಸವನ್ನು ಪಡೆದುಕೊಳ್ಳುತ್ತ, 'ಇಲ್ಲಿ ಕುಳಿತುಕೊಳ್ಳಲು ಅನುಮತಿಯಿಲ್ಲ, ಇಬ್ಬರೂ ಠಾಣೆಗೆ ಬನ್ನಿ' ಎಂದು ಬೆದರಿಸಿದ್ದ. ಬಳಿಕ 'ಠಾಣೆಗೆ ಬಂದರೆ ಹಿರಿಯ ಅಧಿಕಾರಿಗಳಿಗೆ ಉತ್ತರಿಸಬೇಕಾಗುತ್ತದೆ. ಇಲ್ಲಿಯೇ ಒಂದು ಸಾವಿರ ರೂ ದಂಡ ಪಾವತಿಸುವಂತೆ ಹೇಳಿ ಪೇಟಿಎಂ ಮೂಲಕ ಹಣ ಪಡೆದು ತೆರಳಿದ್ದರಂತೆ. ಈ ಘಟನೆಯಿಂದ ಬೇಸತ್ತಿದ್ದ ಯುವತಿ, ತಮ್ಮ ಟ್ವಿಟರ್ ಖಾತೆಯಲ್ಲಿ ತಮಗಾದ ಕಹಿ ಅನುಭವವನ್ನು ವಿವರಿಸಿ ಆರೋಪಿಯ ಬೈಕ್ ಫೋಟೋ ಸಹಿತ ಟ್ವೀಟ್ ಮಾಡಿದ್ದರು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಎಚ್ಎಎಲ್ ಠಾಣಾ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ‌ ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಎಸ್ ಗಿರೀಶ್ ತಿಳಿಸಿದ್ದಾರೆ.

ಇದನ್ನೂ ಓದಿ:ಕಂಬಳಗದ್ದೆಯಲ್ಲಿ ಪ್ರೇಯಸಿ ಜೊತೆಗಿದ್ದ ಯುವಕನಿಗೆ ಮಾಜಿ ಪ್ರೇಮಿ, ಸ್ನೇಹಿತರಿಂದ ಹಲ್ಲೆ

ಹಣದ ಬ್ಯಾಗ್​ ಸಮೇತ ಪರಾರಿಯಾಗಿದ್ದ ಆಟೋ ಚಾಲಕನ ಬಂಧನ : ಇತ್ತೀಚಿಗೆ ಗಾಂಧಿ ಬಜಾರ್​ನಿಂದ ಮಲ್ಲೇಶ್ವರಂನ ಮಾರ್ಗೋಸ ರಸ್ತೆಯಲ್ಲಿರುವ ಕ್ಲಿನಿಕ್​ಗೆ ತೆರಳಲು ಆಟೋ ಹತ್ತಿದ್ದ ಪ್ರಯಾಣಿಕರೊಬ್ಬರು, ತಮ್ಮ ಬ್ಯಾಗ್​ ಅನ್ನು ಆಟೋದಲ್ಲೇ ಇರಿಸಿ ಸ್ವಲ್ಪ ಸಮಯ ಸ್ಥಳದಲ್ಲೇ ಕಾಯುವಂತೆ ಆಟೋ ಚಾಲಕನಿಗೆ ಸೂಚಿಸಿ ಕ್ಲಿನಿಕ್​ಗೆ ತೆರಳಿದ್ದರು. ಪ್ರಯಾಣಿಕರ ಸೂಚನೆಗೆ ಸಮ್ಮತಿಸಿದ್ದ ಆಟೋ ಚಾಲಕ ಅವರ ಬ್ಯಾಗ್​ನಲ್ಲಿದ್ದ 1.5 ಲಕ್ಷ ರೂ ಇರುವುದನ್ನು ಗಮನಿಸಿದ್ದ, ಸಾಲ ಮಾಡಿಕೊಂಡಿದ್ದ ಆರೋಪಿ ಹಣ ನೋಡಿದ ತಕ್ಷಣ ತನ್ನ ಸಾಲವನ್ನು ತೀರಿಸಬಹುದು ಎಂದು ಆಲೋಚಿಸಿ ಬ್ಯಾಗ್​ ಸಮೇತ ಪರಾರಿಯಾಗಿದ್ದ.

ಬ್ಯಾಗ್​ ಜೊತೆ ಆಟೋ ಚಾಲಕ ಪರಾರಿಯಾಗಿದ್ದನ್ನು ಕಂಡ ಪ್ರಯಾಣಿಕರು ಮಲ್ಲೇಶ್ವರಂ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಆರಂಭಿಸಿದ್ದ ಮಲ್ಲೇಶ್ವರಂ ಠಾಣೆಯ ಪೊಲೀಸರು ಆಟೋ ಚಾಲಕ ರಂಗಸ್ವಾಮಿಯನ್ನು ಬಂಧಿಸಿದ್ದು, 1.5 ಲಕ್ಷ ರೂ ನಗದು ಮತ್ತು ಆಟೋ ರಿಕ್ಷಾವನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:ಮಹಿಳೆಯ ಖಾಸಗಿ ವಿಡಿಯೋ ಸೆರೆ ಹಿಡಿದು ಬ್ಲಾಕ್​ಮೇಲ್​: ಆರೋಪಿ ವಿರುದ್ಧ ದೂರು ದಾಖಲು

ABOUT THE AUTHOR

...view details