ಗೋಪಾಲ್‌ಗಂಜ್: ಬಿಹಾರದಲ್ಲಿ ಕಳ್ಳಭಟ್ಟಿ ಸೇವೆ ಪ್ರಕರಣದಲ್ಲಿ ಸಾವಿನ ಸಂಖ್ಯೆ ಏರುತ್ತಲೇ ಇದ್ದು, ಈವರೆಗೆ 33 ಮಂದಿ ಅಸುನೀಗಿದ್ದಾರೆ.
ಇಲ್ಲಿನ ಗೋಪಾಲ್‌ಗಂಜ್ ಜಿಲ್ಲೆಯ ಮಹ್ಮದ್‌ಪುರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕನಿಷ್ಠ 18 ಜನ ಸಾವನ್ನಪ್ಪಿದರೆ, ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ 15 ಜನರು ಮೃತಪಟ್ಟಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರು ಮಂದಿಯ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಕಳ್ಳಭಟ್ಟಿ ಮಾರಾಟಕ್ಕೆ ಕಡಿವಾಣ ಹಾಕಲು ವಿಫಲರಾದ ಆರೋಪದಲ್ಲಿ ಮೊಹಮ್ಮದ್‌ಪುರ್ ಪೊಲೀಸ್ ಠಾಣಾಧಿಕಾರಿಯನ್ನು ಅಮಾನತು ಮಾಡಲಾಗಿದೆ. ಹಲವೆಡೆ ವಿಷಪೂರಿತ ಮದ್ಯ ಮಾರಾಟ ಮಾಡಲಾಗಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಅಧಿಕಾರಿಗಳು ವಿವಿಧ ಪ್ರದೇಶಗಳಲ್ಲಿ ಶೋಧ ನಡೆಸುತ್ತಿದ್ದಾರೆ. ಒಂದು ಮನೆಯಲ್ಲಿ 6 ಪ್ಯಾಕೆಟ್ ಮದ್ಯ ಹಾಗೂ ಇನ್ನೊಂದು ಮನೆಯಲ್ಲಿ 24 ಪ್ಯಾಕೆಟ್ ಸ್ಪಿರಿಟ್ ವಶಪಡಿಸಿಕೊಳ್ಳಲಾಗಿದೆ. ನಾಲ್ವರು ಶಂಕಿತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆಲ್ಕೋಹಾಲ್‌ನಲ್ಲಿರುವ ವಿಷಕಾರಿ ವಸ್ತುಗಳನ್ನು ಗುರುತಿಸಲು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ತನಿಖೆ ಭರದಿಂದ ಸಾಗಿದೆ ಎಂದು ಉಪವಿಭಾಗದ ಪೊಲೀಸ್ ಅಧಿಕಾರಿ ಸಂಜೀವ್ ಕುಮಾರ್ ತಿಳಿಸಿದರು.
ಇದನ್ನೂ ಓದಿ:24 ಗಂಟೆಯಲ್ಲಿ 20 ಮಂದಿ ಸಾವು..ವಿಷಪೂರಿತ ಮದ್ಯವೇ ಕಾರಣಾನಾ?