ಹೊಸಕೋಟೆ(ಬೆಂ.ಗ್ರಾಮಾಂತರ):ಕೋವಿಡ್ ವ್ಯಾಕ್ಸಿನ್ ಹಾಕುವ ವಿಷಯದಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ಪತಿಯೊರ್ವ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ಮಾಡಿರುವ ಘಟನೆ ತಾಲೂಕಿನ ದೊಡ್ಡ ನಲ್ಲೂರಹಳ್ಳಿಯಲ್ಲಿ ನಡೆದಿದೆ.
ವ್ಯಾಕ್ಸಿನ್ ನೀಡಲು ಬಂದ ಆಶಾ ಕಾರ್ಯಕರ್ತೆ ಸೀರೆ ಎಳೆದಾಡಿ ಹಲ್ಲೆ ಆರೋಪ; ಗ್ರಾ.ಪಂ ಸದಸ್ಯೆ ಪತಿ ಬಂಧನಕ್ಕೆ ಆಗ್ರಹ
ತಮಗೆ ಮಾಹಿತಿ ನೀಡಿದೆ ಕೋವಿಡ್ ವ್ಯಾಕ್ಸಿನ್ ಹಾಕಲು ಬಂದಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯೆ ಪತಿ ಆಶಾ ಕಾರ್ಯಕರ್ತೆಯ ಸೀರೆ ಹರಿದು ಹಾಕಿ, ಆಕೆಯ ಮೇಲೆ ಹಲ್ಲೆ ಮಾಡಿರುವ ಘಟನೆ ಹೊಸಕೋಟೆ ತಾಲೂಕಿನ ದೊಡ್ಡ ನಲ್ಲೂರಹಳ್ಳಿಯಲ್ಲಿ ನಡೆದಿದೆ. ಘಟನೆ ಖಂಡಿಸಿರುವ ಆಶಾ ಕಾರ್ಯಕರ್ತೆಯರು, ಆರೋಪಿಯನ್ನು ಬಂಧಿಸುವಂತೆ ನಂದಗುಡಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ಮಾಡಿದ್ದಾರೆ.
ನಂದಗುಡಿ ಪೊಲೀಸ್ ಠಾಣೆಗೆ ದೂರು
ಆರೋಪಿ ಚಲಪತಿ ವರ್ತನೆಯಿಂದ ನೊಂದ ಆಶಾ ಕಾರ್ಯಕರ್ತೆಯರು ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ಗ್ರಾಮ ಪಂಚಾಯಿತಿ ಸದಸ್ಯೆ ಪತಿ ಚಲಪತಿಗೆ ಶಿಕ್ಷೆ ಆಗಬೇಕು ಎಂದು ಪಟ್ಟು ಹಿಡಿದು ಕೆಲಕಾಲ ಪ್ರತಿಭಟನೆ ನಡೆಸಿದ್ದಾರೆ. ದೊಡ್ಡ ನಲ್ಲೂರಹಳ್ಳಿ ಗ್ರಾ.ಪಂಚಾಯಿತಿಯ ಎಲ್ಲಾ ಆಶಾ ಕಾರ್ಯಕರ್ತೆಯರು ಹಲ್ಲೆಯನ್ನು ಖಂಡಿಸಿದ್ದು, ಹಲ್ಲೆಗೊಳಗಾದ ಶ್ರೀದೇವಿ ನ್ಯಾಯ ಕೊಡಿಸುವಂತೆ ಆರೋಗ್ಯಾಧಿಕಾರಿಗಳ ಮೊರೆ ಹೋಗಿದ್ದಾರೆ.
ಈ ವೇಳೆ ಮಾತನಾಡಿದ ಆಶಾ ಕಾರ್ಯಕರ್ತೆ ಶ್ರೀದೇವಿ, ದೊಡ್ಡ ನಲ್ಲೂರಹಳ್ಳಿ ವ್ಯಾಕ್ಸಿನೇಷನ್ ಇದೆ ಎಂದು ಪಂಚಾಯಿತಿ ವಾಟ್ಸಾಪ್ ಗ್ರೂಪ್‌ನಲ್ಲಿ ಸಂದೇಶ ಕಳುಹಿಸಿ ಎಲ್ಲರಿಗೂ ತಿಳಿಸಲಾಗಿದೆ. ಆದರೆ ಗ್ರಾ.ಪಂ ಸದಸ್ಯೆ ಪತಿ ಚಲಪತಿ ಏಕಾಏಕಿ ಬಂದು ನನಗೆ ತಿಳಿಸದೆ ಹೇಗೆ ವ್ಯಾಕ್ಸಿನ್ ಹಾಕಿಸುದ್ದಿರಾ? ಯಾರ ಅನುಮತಿ ಪಡೆದು ಈ ಕೆಲಸವನ್ನು ಮಾಡುತ್ತಿದ್ದಿರಾ ಎಂದು ನನ್ನನ್ನು ಅವ್ಯಾಚ ಪದಗಳಿಂದ ನಿಂದಿಸಿ, ಸೀರೆಯನ್ನು ಎಳೆದಾಡಿದ್ದಾನೆ. ನನ್ನ ಪತಿ ಜಗಳ ಬಿಡಿಸಲು ಬಂದರೆ ಅವರ ಮೇಲೂ ಹಲ್ಲೆ ಮಾಡಿ ಅವ್ಯಾಚ ಪದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ನಾವು ಸಮಾಜ ಸೇವೆ ಮಾಡಲು ಮನೆ-ಮಠ, ಮಕ್ಕಳು ಎಲ್ಲಾವನ್ನು ಬಿಟ್ಟು ಕೇವಲ ನಾಲ್ಕು ಸಾವಿರ ಸಂಬಳಕ್ಕೆ ಬಂದು ಈ ರೀತಿ ಅವಮಾನ ಎದುರಿಸಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.