ತುಮಕೂರು:ಜಿಲ್ಲೆಯ ಗುಬ್ಬಿ ತಾಲೂಕಿನ ಸಿ. ನಂದಿಹಳ್ಳಿಯಲ್ಲಿ ಇಂದು ಬೆಸ್ಕಾಂ ವಿದ್ಯುತ್ ಎಂಎಸ್ಎಸ್ ಸ್ಟೇಷನ್ ಉದ್ಘಾಟನೆ ಕಾರ್ಯಕ್ರಮ ನಡೆದಿತ್ತು. ತುಮಕೂರು ಸಂಸದ ಜಿ.ಎಸ್. ಬಸವರಾಜು ಮತ್ತು ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆದರೆ ಈ ಸಮಾರಂಭದಲ್ಲಿ ಇಬ್ಬರ ನಡುವೆ ಮಾತಿನ ಜಟಾಪಟಿ ನಡೆಯಿತು.
ಉದ್ಘಾಟನಾ ಸಭೆಯಲ್ಲೇ ಜಗಳ:
ಬೆಸ್ಕಾಂ ವಿದ್ಯುತ್ ಎಂಎಸ್ಎಸ್ ಸ್ಟೇಷನ್ ಉದ್ಘಾಟನಾ ಸಭೆಯಲ್ಲೇ ಇಬ್ಬರೂ ಜನಪ್ರತಿನಿಧಿಗಳು ಜಗಳಕ್ಕಿಳಿದರು. ಇಬ್ಬರೂ ಏಕವಚನದಲ್ಲೇ ಬೈದಾಡಿಕೊಂಡರು. ಚೇಳೂರು ಹೋಬಳಿಯಲ್ಲಿ ಚೆಕ್ ಡ್ಯಾಂ ನಿರ್ಮಿಸಲು ಕೇಂದ್ರ ಸರ್ಕಾರ 500 ಕೋಟಿ ರೂಪಾಯಿ ಮೀಸಲಿಟ್ಟಿದೆ ಎಂದು ಸಂಸದ ಬಸವರಾಜು ಹೇಳಿದರು.
ಸಂಸದ ಬಸವರಾಜ್ ಮತ್ತು ಗುಬ್ಬಿ ಶಾಸಕ ಶ್ರೀನಿವಾಸ್ ನಡುವೆ ವಾಗ್ವಾದ ಪರಸ್ಪರ ನಿಂದಿಸಿಕೊಂಡ ಜನಪ್ರತಿನಿಧಿಗಳು
ಆಗ ಗುಬ್ಬಿಯ ಜೆಡಿಎಸ್ ಶಾಸಕ ಶ್ರೀನಿವಾಸ್ ಕೋಪ ನೆತ್ತಿಗೇರಿತು. ರೈತರಿಗೆ ಸುಳ್ಳು ಹೇಳ್ತೀಯಾ ಎಂದು ಏಕವಚನದಲ್ಲೇ ದೂರಿದರು. ನಿಮಗೆ ವಯಸ್ಸಾಗಿದೆ, ಈಗಲಾದರೂ ಸುಳ್ಳು ಹೇಳುವುದನ್ನು ನಿಲ್ಲಿಸಿ ಎಂದು ಬಸವರಾಜು ವಿರುದ್ಧ ವಾಕ್ ಪ್ರಹಾರ ನಡೆಸಿದರು.
ಏನ್ ಮಾತಾಡ್ತೀಯಾ ನೀನು. ನಾನು ಜೀವನದಲ್ಲಿ ಸುಳ್ಳು ಹೇಳಿಲ್ಲ. ನೀನು ಸುಳ್ಳು ಹೇಳುತ್ತಿರೋದು ಎಂದು ಶಾಸಕ ಶ್ರೀನಿವಾಸ್ಗೆ ಸಂಸದ ಬಸವರಾಜು ತಿರುಗೇಟು ನೀಡಿದರು.
ಒಂದು ಹಂತದಲ್ಲಿ ಇಬ್ಬರೂ ಜನಪ್ರತಿನಿಧಿಗಳು ಕುರ್ಚಿಯಿಂದ ಎದ್ದು ನಿಂತು ಪರಸ್ಪರ ಕೈ-ಕೈ ತೋರಿಸುತ್ತಾ ಏಕವಚನದಲ್ಲೇ ನಿಂದಿಸಿಕೊಂಡರು. ಕೊನೆಗೆ ಅಲ್ಲಿದ್ದವರು ಇಬ್ಬರನ್ನೂ ಸಮಾಧಾನಪಡಿಸಿದರು.