ಕರ್ನಾಟಕ

karnataka

ETV Bharat / city

ತುಮಕೂರಿನಲ್ಲಿ ಪ್ರತಿ ಕ್ವಿಂಟಾಲ್‌ ರಾಗಿಗೆ 3,295 ರೂ. ಬೆಂಬಲ ಬೆಲೆ ನಿಗದಿ - ರಾಗಿ

ತುಮಕೂರು ಜಿಲ್ಲೆಯಲ್ಲಿ ಪ್ರತಿ ಕ್ವಿಂಟಾಲ್‌ ರಾಗಿಗೆ 3,295 ರೂ. ಬೆಂಬಲ ಬೆಲೆ ನೀಡಿ ರಾಗಿ ಖರೀದಿಸುವುದಾಗಿ ಡಿಸಿ ಕೆ.ರಾಕೇಶ್ ಕುಮಾರ್‌ ತಿಳಿಸಿದ್ದಾರೆ.

Support Prices For Ragi 3,295 rupees in tumkur
ತುಮಕೂರಿನಲ್ಲಿ ಪ್ರತಿ ಕ್ವಿಂಟಾಲ್‌ ರಾಗಿಗೆ 3,295 ರೂ. ಬೆಂಬಲ ಬೆಲೆ ನಿಗದಿ

By

Published : Dec 17, 2020, 2:31 AM IST

ತುಮಕೂರು: ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ 2020-21ನೇ ಸಾಲಿನಲ್ಲಿ ರೈತರಿಂದ ಪ್ರತಿ ಕ್ವಿಂಟಾಲ್‌ ರಾಗಿಗೆ 3,295 ರೂ. ಬೆಂಬಲ ಬೆಲೆ ನೀಡಿ ಖರೀದಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ರಾಕೇಶ್‌ ಕುಮಾರ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ಜಿಲ್ಲಾ ಟಾಸ್ಕ್‌ಫೋರ್ಸ್‌ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಅವರು, ಜಿಲ್ಲೆಯಲ್ಲಿ ಕಳೆದ ಬಾರಿ ಕುಣಿಗಲ್, ತಿಪಟೂರು, ತುರುವೇಕೆರೆ, ಹುಳಿಯಾರು, ಚಿ.ನಾ.ಹಳ್ಳಿ, ಗುಬ್ಬಿ, ಮಧುಗಿರಿ ಮತ್ತು ತುಮಕೂರಿನಲ್ಲಿ ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿತ್ತು. ಈ ಬಾರಿ ಹೆಚ್ಚುವರಿಯಾಗಿ ಶಿರಾದಲ್ಲಿ ಕೂಡ ಖರೀದಿ ಕೇಂದ್ರವನ್ನು ತೆರೆಯಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ರೈತರು ಡಿ.28 ರಿಂದ 2021ರ ಜನವರಿ 20ರವರೆಗೆ ನೋಂದಣಿಯನ್ನು ಆಯಾ ಖರೀದಿ ಕೇಂದ್ರಗಳಲ್ಲಿ ಆನ್‌ಲೈನ್‌ ಮೂಲಕ ಮಾಡಿಕೊಳ್ಳಬೇಕಿದೆ. ರೈತರು ನೋಂದಾಯಿಸಿಕೊಳ್ಳಲು ಕೃಷಿ ಇಲಾಖೆ ನೀಡಿರುವ ಐಡಿಯನ್ನು ಮಾತ್ರ ಖರೀದಿ ಕೇಂದ್ರದಲ್ಲಿ ಹಾಜರುಪಡಿಸಿ ನೋಂದಾಯಿಸಿಕೊಳ್ಳತಕ್ಕದ್ದು, 2021ರ ಜನವರಿ 21ರಿಂದ ಮಾರ್ಚ್ 31ರವರೆಗೆ ರಾಗಿಯನ್ನು ಖರೀದಿಸಲಾಗುವುದು ಎಂದರು. 50 ಕೆ.ಜಿ. ಸಾಮರ್ಥ್ಯದ ಉತ್ತಮ ಗುಣಮಟ್ಟದ ಗೋಣಿ ಚೀಲದಲ್ಲಿ ರಾಗಿ ತರುವಂತೆ ರೈತರಿಗೆ ಮಾಹಿತಿ ನೀಡಬೇಕು. ಖಾಲಿ ಗೋಣಿ ಚೀಲದ ತೂಕ, ಪ್ರತಿ ಚೀಲಕ್ಕೆ 580 ಗ್ರಾಂ ಸೇರಿಸಿ 50 ಕೆ.ಜಿ. 580 ಗ್ರಾಂ ನಂತೆ ರಾಗಿಯನ್ನು ನಿವ್ವಳ ತೂಕ ತರುವಂತೆ ರೈತರಿಗೆ ತಿಳಿಸಬೇಕು. ಖರೀದಿ ಕೇಂದ್ರ ಮುಂದೆ ಪ್ರತಿ ಚೀಲಕ್ಕೆ 50 ಕೆ.ಜಿ. 580 ಗ್ರಾಂ ತೂಕದಲ್ಲಿ ರಾಗಿ ತರುವಂತೆ ಫಲಕ ಪ್ರದರ್ಶಿಸಬೇಕು ಎಂದು ಅವರು ತಿಳಿಸಿದರು.

ರೈತರಿಂದ ಪ್ರತಿ ಎಕರೆಗೆ 10 ಕ್ವಿಂ.ನಂತೆ ಗರಿಷ್ಠ 50 ಕ್ವಿಂ.ವರೆಗೆ ಮಾತ್ರ ಖರೀದಿಸಲಾಗುವುದು. ಖರೀದಿ ದರ ಪ್ರತಿ ಕ್ವಿಂ.ಗೆ 3,295 ರೂಪಾಯಿ. ಈ ಬಗ್ಗೆ ಬ್ಯಾನರ್ ಮತ್ತು ಕರಪತ್ರಗಳಲ್ಲಿ ಮುದ್ರಿಸಿ ಪ್ರಚಾರ ಮಾಡಲು ಇದೇ ವೇಳೆ ಡಿಸಿ ಸೂಚಿಸಿದರು. ಸಭೆಯಲ್ಲಿ ಆಹಾರ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸಯ್ಯ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಸುಲೋಚನಾ ಸೇರಿದಂತೆ ಕೃಷಿ ಮಾರುಕಟ್ಟೆ ಹಾಗೂ ತೂಕ ಮತ್ತು ಅಳತೆ ಮಾಪನ ಇಲಾಖೆ ಸಹಾಯಕ ನಿರ್ದೇಶಕ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ABOUT THE AUTHOR

...view details