ಶಿವಮೊಗ್ಗ: ಮಲೆನಾಡನ್ನು ಪ್ರತಿವರ್ಷ ಆತಂಕದ ಕೂಪಕ್ಕೆ ತಳ್ಳುತ್ತಿದ್ದ ಮಂಗನಕಾಯಿಲೆ ಆರ್ಭಟ ಈ ವರ್ಷ ತಣ್ಣಗಾಗಿದೆ. ಪ್ರತಿ ವರ್ಷ ಮಂಗನಕಾಯಿಲೆಯಿಂದ ಹತ್ತಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದರು. ಈ ವರ್ಷ ಆರೋಗ್ಯ ಇಲಾಖೆ ಕೈಗೊಂಡ ಮುಂಜಾಗ್ರತಾ ಕ್ರಮಗಳ ಫಲವಾಗಿ ಪೆಡಂಭೂತವಾಗಿ ಜನರನ್ನು ಕಾಡುತ್ತಿದ್ದ ಕೆಎಫ್‌ಡಿ (ಕ್ಯಾಸನೂರು ಫಾರೆಸ್ಟ್ ಡಿಸೀಸ್) ಈ ಬಾರಿ ಮಂಕಾಗಿದ್ದು, ಎರಡೂ ತಿಂಗಳಾದರೂ ಒಂದೂ ಪ್ರಕರಣ ದಾಖಲಾಗಿಲ್ಲ.
ಪ್ರತಿ ವರ್ಷ ಡಿಸೆಂಬರ್ ತಿಂಗಳು ಬಂತೆಂದರೆ ಸಾಕು, ಮಲೆನಾಡಿನ ಜನರ ಮನೆಯಿಂದ ಹೊರಬರಲು ಹೆದರುವಂಥ ಸ್ಥಿತಿಯನ್ನು ಮಂಗನಕಾಯಿಲೆ ತಂದಿಡುತ್ತಿತ್ತು. ಸಾಮಾನ್ಯವಾಗಿ ಡಿಸೆಂಬರ್ ತಿಂಗಳಲ್ಲಿ ಆರಂಭವಾಗಿ ಮೇ ಜೂನ್‌ವರೆಗೂ ಇರುತ್ತಿದ್ದ ಕೆಎಫ್‌ಡಿ, ಮಾರ್ಚ್ ಏಪ್ರಿಲ್ಲ್ನಲ್ಲಿ ತೀವ್ರ ಮಟ್ಟದಲ್ಲಿರುತ್ತಿತ್ತು. 2018-19ರಲ್ಲಿ ನವೆಂಬರ್ ಮೂರನೇ ವಾರದಲ್ಲಿ ಕಾಣಿಸಿಕೊಂಡು ಅದೇ ವರ್ಷ ಇತಿಹಾಸದಲ್ಲೇ ಅತಿ ಹೆಚ್ಚು ಮರಣ ಪ್ರಮಾಣ ದಾಖಲಾಗಿತ್ತು.
ಆ ವರ್ಷ ಇಡೀ ರಾಜ್ಯದಲ್ಲಿ 445 ಪ್ರಕರಣಗಳು ವರದಿಯಾಗಿ ಅದರಲ್ಲಿ 15 ಮಂದಿ ಮೃತಪಟ್ಟಿದ್ದರು. ಶಿವಮೊಗ್ಗದ ಅರಳಗೋಡು ಗ್ರಾಮವೊಂದರಲ್ಲೇ 12 ಮಂದಿ ಸಾವಿಗೀಡಾಗಿದ್ದರು. ಅತಿ ಹೆಚ್ಚು ಪಾಸಿಟಿವ್ ಕೇಸ್‌ಗಳು ಶಿವಮೊಗ್ಗದಲ್ಲೇ ವರದಿಯಾದವು. ಆ ಘಟನೆ ನಂತರ ವ್ಯಾಕ್ಸಿನೇಷನ್ಗೆ ಹೆಚ್ಚು ಮಹತ್ವ ನೀಡಲಾಗಿ 2019-20 ರಲ್ಲಿ 255 ಮಂದಿಯಲ್ಲಿ ಕೆಎಫ್‌ಡಿ ವೈರಸ್ ಕಾಣಿಸಿಕೊಂಡು 5 ಮಂದಿ ಮೃತಪಟ್ಟಿದ್ದರು. ಆದರೆ ಈ ವರ್ಷ ಫೆಬ್ರವರಿ ಮೊದಲ ವಾರದವರೆಗೂ ಯಾವುದೇ ಕೇಸ್‌ಗಳು ಕಾಣಿಸಿಕೊಳ್ಳದಿರುವುದು ಇಲಾಖೆಯ ಕ್ರಮಗಳು ಫಲ ನೀಡುತ್ತಿವೆ ಎಂಬ ವಿಶ್ವಾಸ ಮೂಡಿದೆ.