ಮೈಸೂರು:ಹಣಕ್ಕಾಗಿ ಪ್ರಿಯಕರ ಹಾಗೂ ಆತನ ಸ್ನೇಹಿತರು ಒತ್ತಡ ಹೇರುತ್ತಿದ್ದರಿಂದ ಮನನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಎನ್.ಆರ್ ಮೋಹಲ್ಲಾದಲ್ಲಿ ನಡೆದಿದೆ. ಸಂಗೀತಾ (22) ಮೃತ ಯುವತಿಯಾಗಿದ್ದಾರೆ.
ಈಕೆ ಎನ್.ಆರ್ ಮೊಹಲ್ಲಾದ ಆಕಾಶ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಈತ ಕೆಫೆ ಅಂಗಡಿ ತೆರೆಯುವ ಸಲುವಾಗಿ ಸಂಗೀತಾ ತಾಯಿಯ ಹೆಸರಿನಲ್ಲಿರುವ ಮನೆ ಮೇಲೆ ಸಾಲ ಪಡೆದು ಹಣ ಕೊಡುವಂತೆ ಒತ್ತಡ ಹೇರುತ್ತಿದ್ದನಂತೆ. ಇದರಿಂದ ಮನನೊಂದು ಸಂಗೀತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಆಕೆಯ ತಾಯಿ, ಪ್ರಿಯಕರ ಆಕಾಶ್ ಹಾಗೂ ಆತನ ಸ್ನೇಹಿತರ ವಿರುದ್ಧ ಎನ್.ಆರ್ ಠಾಣೆಗೆ ದೂರು ನೀಡಿದ್ದಾರೆ.
ನನ್ನ ಮಗಳು ಕಳೆದ ಮೇ 7ರಂದು ಈ ವಿಚಾರವನ್ನು ತಿಳಿಸಿದ್ದಳು. ಹಣಕಾಸಿನ ವಿಚಾರವಾಗಿ ಪ್ರಿಯಕರ ಆಕಾಶ್, ಆತನ ಸ್ನೇಹಿತರಾದ ಸತ್ಯ ಮತ್ತು ಸ್ನೇಹಿತೆ ಟೀನಾ ನನ್ನ ಮಗಳಿಗೆ ಕರೆ ಮಾಡಿ ಒತ್ತಡ ಹೇರಿದ್ದಾರೆ. ಈ ವೇಳೆ, ತಾನು ಇವರಿಂದ ಮಾನಸಿಕ ಹಿಂಸೆಗೆ ಒಳಗಾಗಿದ್ದು, ನಾನು ಸತ್ತರೆ ಅವರೇ ಕಾರಣ ಎಂದು ಮಗಳು ನನ್ನ ಜೊತೆ ಹೇಳಿಕೊಂಡಿದ್ದಳು ಎಂದು ಮೃತ ಸಂಗೀತಾ ತಾಯಿ ಭಾಗ್ಯ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಸಂಗೀತಾಳ ಪ್ರಿಯಕರ ಆಕಾಶ್ ಸ್ನೇಹಿತರಾದ ಸತ್ಯ ಮತ್ತು ಟೀನಾ ವಿರುದ್ಧ ಎನ್.ಆರ್ ಠಾಣೆಯ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಓವರ್ ಟೇಕ್ ಮಾಡುವ ಭರದಲ್ಲಿ ಬೈಕ್ಗೆ ಕಾರು ಡಿಕ್ಕಿ: ವಕೀಲ, ಕಕ್ಷಿದಾರ ಸ್ಥಳದಲ್ಲೇ ಸಾವು