ಮೈಸೂರು:ಬೃಹತ್ ಸ್ಯಾಂಡಲ್ವುಡ್ ಸ್ಮಗ್ಲಿಂಗ್ ಜಾಲ ಭೇದಿಸಿರುವ ಸಿಸಿಬಿ ಪೊಲೀಸರು 1 ಕೋಟಿ ರೂ. ಮೌಲ್ಯದ 700 ಕೆಜಿ ಶ್ರೀಗಂಧ, 15 ಸಾವಿರ ಹಣ, 1 ಗೂಡ್ಸ್ ಕ್ಯಾರಿಯರ್ ವಾಹನ, ಎರಡು ಮೊಬೈಲ್ ಫೋನ್ ವಶಕ್ಕೆ ಪಡೆದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಡಿ. 13ರಂದು ಮೈಸೂರು ನಗರದ ಮಂಡಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಈ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ ನಂತರ ನಿಗೂಢ ಜಾಲವೊಂದು ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಜಾಲವನ್ನು ಭೇದಿಸಲು ಪೊಲೀಸರು ತಂತ್ರ ರೂಪಿಸಿದ್ದಾರೆ. ಜತೆಗೆ ಇಲ್ಲಿ ಶ್ರೀಗಂಧದ ಕಳ್ಳಸಾಗಾಣಿಕೆಗೆ ರಾಷ್ಟ್ರೀಯ ಮಟ್ಟದ ಜಾಲದ ಲಿಂಕ್ ಇರುವುದು ಗೊತ್ತಾಗಿದ್ದು, ಅವರ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ.
ನಗರದಲ್ಲಿ ಮಂಗಳವಾರ ನಸುಕಿನ ಜಾವ 1 ಕೋಟಿ ರೂ.ಮೌಲ್ಯದ ಶ್ರೀಗಂಧ ಕಳ್ಳಸಾಗಣೆ ಮಾಡುವಾಗ ಪೊಲೀಸರಿಗೆ ಸಿಕ್ಕಿಬಿದ್ದ ಆರೋಪಿಗಳ ವಿಚಾರಣೆಯಲ್ಲಿ ಮಹತ್ವದ ವಿಚಾರಗಳು ಹೊರಬಿದ್ದಿವೆ. ಶ್ರೀಗಂಧ ಮರ ಕಳ್ಳಸಾಗಣೆ ಮಾಡಲು ಸಿನಿಮೀಯ ತಂತ್ರಗಳನ್ನು ಚೋರರು ಬಳಸುತ್ತಿರುವುದು ಬೆಳಕಿಗೆ ಬಂದಿದೆ. ಸಿಕ್ಕಿಬಿದ್ದಿರುವ ಮಂಗಳೂರು ಮತ್ತು ಕೇರಳ ಮೂಲದ ಇಬ್ಬರು ಆರೋಪಿಗಳು ಕೇವಲ ಸಾಗಣೆ ಮಾಡುತ್ತಿದ್ದವರಾಗಿದ್ದು, ಮೂಲ ಮಾಫಿಯಾದ ಸುಳಿವು ಅವರಿಗೂ ತಿಳಿದಿಲ್ಲ ಎನ್ನಲಾಗ್ತಿದೆ.
ಸಿನಿಮೀಯ ರೀತಿಯಲ್ಲಿ ಕಳ್ಳ ಸಾಗಣಿಕೆ, ಸಾಗಣೆದಾರರಿಗೂ ಸಿಗದ ಸುಳಿವು:
ಆರೋಪಿಗಳಿಗೆ ಕರೆ ಮಾಡುವ ವ್ಯಕ್ತಿ ನಿರ್ದಿಷ್ಟ ಸ್ಥಳಕ್ಕೆ ಬರಲು ಹೇಳುತ್ತಾನೆ. ವ್ಯಕ್ತಿಯೊಬ್ಬ ವಿಶೇಷವಾಗಿ ವಿನ್ಯಾಸಗೊಳಿಸಿದ ಸರಕು ಸಾಗಣಿಕೆ ವಾಹನವನ್ನು ತಂದು ನಿಲ್ಲಿಸಿ ತೆರಳುತ್ತಾನೆ. ಅದನ್ನು ಆರೋಪಿಗಳು ಚಾಲನೆ ಮಾಡಿಕೊಂಡು ಮೈಸೂರಿನ ಮಂಡಿ ಮೊಹಲ್ಲಾಗೆ ಬಂದು ಪುಲಿಕೇಶಿ ರಸ್ತೆ ಹಾಗೂ ಎಂಕೆಡಿಕೆ ರಸ್ತೆ ಸೇರುವ ಜಂಕ್ಷನ್ನಲ್ಲಿ ನಿಲ್ಲಿಸುತ್ತಾರೆ.
ವ್ಯಕ್ತಿಯೊಬ್ಬ ಅಲ್ಲಿಗೆ ಚೀಲಗಳಲ್ಲಿ ಶ್ರೀಗಂಧದ ತುಂಡುಗಳನ್ನು ತಂದು ವಾಹನದ ಚಾಲಕನ ಹಿಂಬದಿಯಲ್ಲಿ ರಹಸ್ಯವಾಗಿ ನಿರ್ಮಿಸಿರುವ ಕ್ಯಾಬಿನ್ಗೆ ತುಂಬುತ್ತಾನೆ. ಅಲ್ಲಿಂದ ವಾಹನವನ್ನು ಬೆಂಗಳೂರಿನ ನಿರ್ದಿಷ್ಟ ಸ್ಥಳದಲ್ಲಿ ನಿಲ್ಲಿಸುತ್ತಾರೆ. ಅಲ್ಲಿಗೆ ಬರುವ ವ್ಯಕ್ತಿಯೊಬ್ಬ ಯಾವುದೇ ಮಾತನಾಡದೇ 20 ಸಾವಿರ ರೂ. ಹಣ ನೀಡಿ ವಾಹನ ಸಮೇತ ತೆರಳುತ್ತಾನೆ. ಖರೀದಿದಾರರ ಸ್ವಲ್ಪ ಸುಳಿವು ಸಾಗಣೆದಾರರಿಗೆ ಸಿಗದ ರೀತಿಯಲ್ಲಿ ಮಾಫಿಯಾ ಕಾರ್ಯಾಚರಣೆ ನಡೆಸುತ್ತಿದೆ ಎಂದು ಕಾರ್ಯಾಚರಣೆ ತಂಡದ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದ್ದಾರೆ.