ಕರ್ನಾಟಕ

karnataka

ETV Bharat / city

ಭಾರತ ಸಹ ಪಾಕ್‌ ಮತ್ತು ಬಾಂಗ್ಲಾ ರೀತಿ ಪ್ರತ್ಯೇಕವಾಗುವ ಸ್ಥಿತಿ ನಿರ್ಮಾಣವಾಗಬಹುದು.. ಸಂಸದ ಪ್ರತಾಪ್ ಸಿಂಹ - ಹಿಜಾಬ್ ಪ್ರಕರಣ ಪ್ರತಾಪ್ ಸಿಂಹ ಪ್ರತಿಕ್ರಿಯೆ

ಟಿಪ್ಪು ಪುಸ್ತಕ ಬಗ್ಗೆ ಪ್ರತಿಕ್ರಿಯಿಸಿದ ಸಂಸದರು, ಟಿಪ್ಪು ಮೈಸೂರು ಬೆಳವಣಿಗೆಗೆ ಏನನ್ನು ಕೊಟ್ಟಿಲ್ಲ. ಟಿಪ್ಪುವನ್ನ ಹೊಗಳಿ ಅಟ್ಟಕ್ಕೆ ಏರಿಸಬೇಡಿ. ಜನ ಒಪ್ಪುವುದಿಲ್ಲ ಎಂದರು..

Mp Pratap simha
ಪ್ರತಾಪ್ ಸಿಂಹ

By

Published : Apr 9, 2022, 2:29 PM IST

ಮೈಸೂರು :ಹಿಜಾಬ್ ಪ್ರಕರಣದಲ್ಲಿ ಕಾನೂನಾತ್ಮಕವಾಗಿ ನಡೆದುಕೊಂಡಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ. ಈಗಲೂ ಈ ವಿಚಾರದಲ್ಲಿ ನಮ್ಮದು ತಪ್ಪಾಯಿತು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸಾರ್ವಜನಿಕವಾಗಿ ಒಪ್ಪಿಕೊಳ್ಳಬೇಕು ಎಂದು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿರುವುದು..

ರಾಜ್ಯದಲ್ಲಿ ಮುಸ್ಲಿಂ ವ್ಯಾಪಾರದ ವಿರುದ್ಧ ಅಭಿಯಾನ ನಡೆಯುತ್ತಿದೆ ಎಂಬ ಮಾಧ್ಯಮ ಪ್ರಶ್ನೆಗೆ ಉತ್ತರಿಸಿದ ಸಂಸದ ಪ್ರತಾಪ್ ಸಿಂಹ, ಅಭಿಯಾನ ಪ್ರಶ್ನೆ ಮಾಡುವ ಬದಲು ಇದಕ್ಕೆ ಕಾರಣ ಯಾರು? ಎಂಬುದನ್ನ ತಿಳಿದುಕೊಳ್ಳಬೇಕು. ಹಿಜಾಬ್ ಸಮಸ್ಯೆ ಬಂದಾಗಲೇ ಮಕ್ಕಳಿಗೆ ಶಾಲೆಗೆ ಹೋಗುವಂತೆ ಸಿದ್ದರಾಮಯ್ಯ ಬುದ್ದಿ ಹೇಳಬೇಕಿತ್ತು. ಆಗ ಈ ಸಮಸ್ಯೆ ಬರುತ್ತಿರಲಿಲ್ಲ ಎಂದರು.

ಹಿಂದೂಗಳು ಯಾವತ್ತೂ ಈ ವಿಚಾರವನ್ನ ಕೈಗೆತ್ತಿಕೊಂಡಿರಲಿಲ್ಲ. ಹೈಕೋರ್ಟ್ ತೀರ್ಪಿಗೆ ಮುಸ್ಲಿಂಮರು ಬೆಲೆ ಕೊಡಲಿಲ್ಲ. ಅದಕ್ಕಾಗಿ ಈ ರೀತಿ ಅಭಿಯಾನ ಆರಂಭವಾಗಿದೆ. ಇದು ಹಿಂದೂಗಳ ಪ್ರತಿಕ್ರಿಯೆ ಅಷ್ಟೇ.. ‌ಹಿಂದೂಗಳು ಯಾರ ಮೇಲೂ ಆಕ್ರಮಣ ಮಾಡಿಲ್ಲ, ಹಿಂಸಾಚಾರ ಮಾಡಿಲ್ಲ. ಕಿಡಿ ಹಚ್ಚುವ ಕೆಲಸ ಮಾಡಿಲ್ಲ. ಮುಸ್ಲಿಂಮರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಹಿಜಾಬ್ ಪ್ರಕರಣದಲ್ಲಿ ಕಾನೂನಾತ್ಮಕವಾಗಿ ನಡೆದುಕೊಂಡಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ. ಸಿದ್ದರಾಮಯ್ಯ ಈ ರೀತಿ ಚಿತಾವಣೆ ಕೊಡುವುದನ್ನ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಜಿಹಾದಿ ಮನಸ್ಥಿತಿ ಪ್ರೋತ್ಸಾಹಿಸುವುದನ್ನ ನಿಲ್ಲಿಸಿ : ಕೋಲಾರದಲ್ಲಿ ಶೋಭಯಾತ್ರೆ ಮೇಲೆ ಕಲ್ಲು ತೂರಾಟ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಸಿದ್ದರಾಮಯ್ಯನಂತವರು ಜಿಹಾದಿ ಮನಸ್ಥಿತಿಯನ್ನ ಪ್ರೋತ್ಸಾಹಿಸುವುದನ್ನು ನಿಲ್ಲಿಸಬೇಕು. ಎಲ್ಲಿಯವರೆಗೆ ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೆ ಇಂತಹ ಘಟನೆಗಳು ಮರುಕಳಿಸುತ್ತಿರುತ್ತವೆ. ರಾಜಕೀಯಕ್ಕಾಗಿ ಹೀಗೆ ಪ್ರೋತ್ಸಾಹಿಸಿದರೆ ಭಾರತವು ಸಹ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ರೀತಿ ಪ್ರತ್ಯೇಕ ಆಗುವ ಸ್ಥಿತಿ ನಿರ್ಮಾಣವಾಗಬಹುದು. ನಿಮಗೆ ಅಧಿಕಾರ ಶಾಶ್ವತವಲ್ಲ. ಅಧಿಕಾರಕ್ಕಾಗಿ ಭಾರತವನ್ನ ಹಾಳು ಮಾಡಬೇಡಿ ಎಂದು ಕಿಡಿಕಾರಿದರು.

2‌015ರಲ್ಲಿ ಎಸ್​​ಡಿಪಿಐ ಹಾಗೂ ಕೆಎಫ್​​ಡಿ ಮೇಲಿನ ಕ್ರಿಮಿನಲ್ ಪ್ರಕರಣಗಳನ್ನ ವಾಪಸ್ ತೆಗೆದುಕೊಂಡು, ಕ್ರಿಮಿನಲ್​​ಗಳು ರಾಜಾರೋಷವಾಗಿ ಓಡಾಡಲು ಬಿಟ್ಟಿದ್ದೀರಿ. ಇದರಿಂದ ಸರಣಿ ಹತ್ಯೆಗಳು ನಡೆದವು. ನಿಮ್ಮ ಕಾಲದಲ್ಲಿ ಟಿಪ್ಪು ಜಯಂತಿ ಮಾಡಿ, ತಾಲಿಬಾನ್ ಮನಸ್ಥಿತಿಗೆ ಪ್ರೋತ್ಸಾಹ ನೀಡಿದ್ದೀರಿ ಎಂದು ಸಿದ್ದರಾಮಯ್ಯ ವಿರುದ್ಧ ಆರೋಪಿಸಿದರು.

2023ರಲ್ಲಿ ಮತ್ತೆ ಅಧಿಕಾರ ಸಿಕ್ಕರೆ ಇದೇ ಮನಸ್ಥಿತಿಗಳಿಗೆ ಅವಕಾಶ ಹಾಗೂ ಪ್ರೋತ್ಸಾಹ ಸಿಗುತ್ತದೆ ಎಂಬ ಹಿನ್ನೆಲೆ ಬೆಂಬಲ ನೀಡುತ್ತಿದ್ದೀರಿ. ಅಧಿಕಾರಕ್ಕಾಗಿ ಕರ್ನಾಟಕದ ಶಾಂತಿ ಹಾಳು ಮಾಡಬೇಡಿ‌‌. ಟಿಪ್ಪು ಜಯಂತಿ ಮಾಡಿ ಹತ್ತಾರು ಕೊಲೆಗಳಿಗೆ ದಾರಿ ಮಾಡಿಕೊಟ್ಟಿದ್ದೀರಿ. ಶಾಸಕ ತನ್ವೀರ್ ಸೇಠ್ ಮೇಲೂ ಹಲ್ಲೆಯಾಯಿತು. ಹಿಂದೂ ಕಾರ್ಯಕರ್ತರ ಹತ್ಯೆಯಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಟಿಪ್ಪು ಪುಸ್ತಕ ಬಗ್ಗೆ ಪ್ರತಿಕ್ರಿಯಿಸಿದ ಸಂಸದರು, ಟಿಪ್ಪು ಮೈಸೂರು ಬೆಳವಣಿಗೆಗೆ ಏನನ್ನು ಕೊಟ್ಟಿಲ್ಲ. ಟಿಪ್ಪುವನ್ನ ಹೊಗಳಿ ಅಟ್ಟಕ್ಕೆ ಏರಿಸಬೇಡಿ. ಜನ ಒಪ್ಪುವುದಿಲ್ಲ ಎಂದರು.

ಇದನ್ನೂ ಓದಿ:ಭಾಷೆಯನ್ನೂ ಟೂಲ್ ಕಿಟ್ ಮಾಡಿಕೊಂಡು ವಿಭಜನೆಗೆ ಹೊರಟಿರುವುದು ದೇಶಕ್ಕೆ ಗಂಡಾಂತರಕಾರಿ: ಹೆಚ್ ಡಿಕೆ

ABOUT THE AUTHOR

...view details