ಮೈಸೂರು: ದೇಶದ ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಮಾಧ್ಯಮ ಸೇರಿದಂತೆ ಸ್ವತಂತ್ರ ಸಂಸ್ಥೆಗಳ ಮೇಲೆ ಮೋದಿ ಹಾಗೂ ಅಮಿತ್ ಶಾ ದಾಳಿ ಮಾಡುತ್ತಿದ್ದಾರೆ. ಆ ಸಂಸ್ಥೆಗಳನ್ನು ತಮಗೆ ಬೇಕಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಫೋನ್ ಟ್ಯಾಪ್ ಮಾಡುವ ಮೂಲಕ ಸರ್ಕಾರವನ್ನು ಬೀಳಿಸಲಾಯಿತು. ಅದೇ ರೀತಿ ಯಡಿಯೂರಪ್ಪ ಅವರನ್ನು ಕೆಳಗಿಸಲಾಯಿತು. ಕರ್ನಾಟಕ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಆರ್ಎಸ್ಎಸ್ ನವರು ಕೆಲವು ಭ್ರಷ್ಟ ಸಚಿವರನ್ನು ಬಿಡಿ ಎಂದು ಹೇಳುತ್ತಿದ್ದಾರೆ. ಮತ್ತೆ ಕೆಲವು ಸಚಿವರು ಸಿಡಿ ವಿಚಾರದಲ್ಲಿ ನ್ಯಾಯಲಯಕ್ಕೆ ಹೋಗಿದ್ದಾರೆ ಎಂದರು.
ಜನರು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿ ಮನೆ ಮಠ ಕಳೆದುಕೊಂಡಿದ್ದಾರೆ. ಇವರ ಕಷ್ಟ ಕೇಳಲು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿಲ್ಲ. ಬಿಹಾರ ಮತ್ತು ಗುಜರಾತ್ಗೆ ಹೋಗುತ್ತಾರೆ. ಆದರೆ, ಕರ್ನಾಟಕ ಭಾರತದ ಭೂಪಟದಲ್ಲಿ ಇದೆ ಎಂಬುದನ್ನು ಮರೆತ್ತಿದ್ದಾರೆ ಎಂದು ಸುರ್ಜೇವಾಲಾ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.