ಮೈಸೂರು: ಮೈಸೂರಿನ ಹೊರವಲಯದ ಶ್ರೀನಗರದಲ್ಲಿ ಕಳೆದ ಎರಡು ದಿನಗಳ ಹಿಂದೆ ನಡೆದಿದ್ದ ಜೋಡಿ ಕೊಲೆ ಪ್ರಕರಣದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಕೆ.ಜಿ ಕೊಪ್ಪಲಿನ ನಿವಾಸಿ ಸಾಗರ್ ಬಂಧಿತ ಆರೋಪಿ. ಅ.21ರ ತಡರಾತ್ರಿ ಶ್ರೀನಗರದ ನಿವಾಸದಲ್ಲಿ ತಂದೆ ಶಿವಪ್ರಕಾಶ್ ಮತ್ತು ಅವನ ಜೊತೆಗಿದ್ದ ಪ್ರೇಯಸಿ ಲತಾ ಅವರನ್ನ ಮಚ್ಚಿನಿಂದ ಕೊಲೆ ಮಾಡಿ ಸಾಗರ್ ನಾಪತ್ತೆಯಾಗಿದ್ದ.
ನಂಜನಗೂಡು ಬಳಿ ಸಾಗರ್ನನ್ನು ದಕ್ಷಿಣ ಠಾಣಾ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ಘಟನೆಯ ಹಿನ್ನೆಲೆ:ಆಸ್ತಿ ವಿವಾದ ಹಾಗೂ ಅನೈತಿಕ ಸಂಬಂಧದ ಕಾರಣಕ್ಕಾಗಿ ಆರೋಪಿ ಸಾಗರ್ ತನ್ನ ತಂದೆ ಹಾಗೂ ಆತನ ಜತೆಗಿದ್ದ ಮಹಿಳೆಯನ್ನ ಬರ್ಬರ ಕೊಲೆ ಮಾಡಿದ್ದ. ಕೊಲೆಯಾದ ಶಿವಪ್ರಕಾಶ್ ಸಾಕಷ್ಟು ಹಣವಂತನಾಗಿದ್ದು, ಕಳೆದ 20 ವರ್ಷಗಳಿಂದ ಲತಾ ಎಂಬ ಮಹಿಳೆ ಜತೆ ಸಂಬಂಧ ಬೆಳೆಸಿದ್ದ. ಈ ವಿಚಾರವಾಗಿ ಮಗ ಪದೇಪದೆ ಜಗಳ ತೆಗೆದಿದ್ದ. ಸಾಕಷ್ಟು ಬಾರಿ ಈ ವಿಚಾರವಾಗಿ ಪೊಲೀಸ್ ಠಾಣೆ ಮೆಟ್ಟಿಲು ಕೂಡ ಹತ್ತಿದ್ದ. ಅಷ್ಟೇ ಅಲ್ಲ, ಶಾಸಕರ ಸಮ್ಮುಖದಲ್ಲಿ ಹಲವು ಬಾರಿ ತಂದೆ-ಮಗನ ಜಗಳ ರಾಜೀ ಮಾಡಲಾಗಿತ್ತು.
ಅ.21ರ ತಡರಾತ್ರಿ ಲತಾ ಮನೆಯೊಳಗಿದ್ದ ತಂದೆಯನ್ನು ಹೊರಗೆ ಕರೆಸಿದ ಸಾಗರ್ ಅಲ್ಲೇ ಗಲಾಟೆ ಶುರು ಮಾಡಿದ್ದ. ಹೊರಗೆ ತಂದೆ ಮಕ್ಕಳ ಜಗಳ ಬಿಡಿಸಲು ಲತಾ ಹಾಗೂ ಆಕೆಯ ಮಗ ನಾಗಾರ್ಜುನ ಬಂದಿದ್ದರು. ಆಗ ಆರೋಪಿ ಸಾಗರ್ ತಾನು ತಂದಿದ್ದ ಮಚ್ಚಿನಿಂದ ತಂದೆಯ ಕತ್ತಿಗೆ ಹೊಡೆದು ಕೊಂದಿದ್ದಾನೆ. ಈ ವೇಳೆ ಗಲಾಟೆ ಬಿಡಿಸಲು ಬಂದ ಲತಾ ತಲೆಗೂ ಮಚ್ಚಿನಿಂದ ಹೊಡೆದಿದ್ದು, ತೀವ್ರ ರಕ್ತಸ್ರಾವದಿಂದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದರು.
ಇದನ್ನೂ ಓದಿ:ಡ್ರೈವರ್ ಹೆಂಡ್ತಿ ಜತೆಗೆ ಇನ್ನೊಂದು ಸಂಸಾರ ಹೂಡಿದ್ದ.. ಆಸ್ತಿಗಾಗಿ ತಂದೆ ಜತೆ ಆಕೆಯನ್ನೂ ಮುಗಿಸಿಬಿಟ್ಟ ಮಗ..