ಮೈಸೂರು:ಅನರ್ಹ ಶಾಸಕರ ವಿಚಾರಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆದೇಶ ಬಂದ 10ದಿನದೊಳಗೆ ಮಂತ್ರಿ ಸ್ಥಾನ ಕೊಡುವುದಾಗಿ ಸಿಎಂ ಬಿ.ಎಸ್.ಯಡಿಯೂರಪ್ಪನವರೇ ಅನರ್ಹರಿಗೆ ಭರವಸೆ ನೀಡಿದ್ದಾರೆ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಪರೇಷನ್ ಕಮಲ ನಡೆದಿಲ್ಲ. ಸ್ವಇಚ್ಛೆಯಿಂದಲೇ ಎಲ್ಲರೂ ಬಂದಿದ್ದಾರೆ. ಅವರನ್ನು ಸ್ವಿಕರ್ ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಕೇಸ್ ದಾಖಲಿಸಿದ್ದಾರೆ. ಇದು ಇತ್ಯರ್ಥವಾದ 10 ದಿನದಲ್ಲಿ ಸಚಿವ ಸ್ಥಾನ ಕೊಡುವುದಾಗಿ ಸಿಎಂ ಹೇಳಿಕೆ ನೀಡಿದ್ದಾರೆ. ಅವರೆಲ್ಲರೂ ಮಂತ್ರಿಗಳಾಗುತ್ತಾರೆ ಎಂದು ಶ್ರೀನಿವಾಸ್ ಪ್ರಸಾದ್ ತಿಳಿಸಿದ್ದಾರೆ.
ದಸರಾ ಹಿನ್ನಲೆಯಲ್ಲಿ ಮೈಸೂರು ಉಸ್ತುವಾರಿ ಸಚಿವರಾಗಿ ವಿ.ಸೋಮಣ್ಣ ನೇಮಕವಾಗಿದ್ದಾರೆ. ಸಚಿವ ಸಂಪುಟದಲ್ಲಿ 17 ಮಂದಿಗೆ ಸ್ಥಾನ ಸಿಕ್ಕಿದೆ. ಉಳಿದ ಸ್ಥಾನಗಳಿಗೆ ಭರ್ತಿಗೆ ಸಂಬಂಧಿಸಿದಂತೆ ಸಿಎಂ ಹೈಕಮಾಂಡ್ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ. ಈಗ ಅನರ್ಹರೂ ದೆಹಲಿಯಲ್ಲಿದ್ದು, ಅಲ್ಲಿಯೇ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳುತ್ತಾರೆ ಎಂದರು.
ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಇನ್ನೂ ಹೆಚ್‌ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಶ್ರೀನಿವಾಸ್ ಪ್ರಸಾದ್, ಸಿದ್ದರಾಮಯ್ಯ ಮತ್ತು ದೇವೇಗೌಡ ಇಬ್ಬರೂ ಬೆನ್ನಿಗೆ ಚೂರಿ ಹಾಕುವವರು. ಹಾಗಯೇ ಮೇಲೆ ಬಂದವರು. ಈಗ ಪರಸ್ಪರ ಮಾತಿನ ವಾಗ್ದಾಳಿ ನಡೆಸುತ್ತಿದ್ದಾರೆ. ಇದನ್ನು ನೋಡಿದರೆ ಜನರು ಅಸಹ್ಯ ಪಟ್ಟುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.