ಮೈಸೂರು: ನಾಪತ್ತೆಯಾಗಿದ್ದ ವಿವಾಹಿತ ಮಹಿಳೆಯೊಬ್ಬರು ಬಿಜಾಪುರದ ಬಸವನ ಬಾಗೇವಾಡಿಯಲ್ಲಿ ಪ್ರಿಯಕರನೊಂದಿಗೆ ಪತ್ತೆಯಾಗಿರುವ ಘಟನೆ ನಡೆದಿದೆ.
ಜಿಲ್ಲೆಯ ತಿ.ನರಸೀಪುರದ ಪಟ್ಟಣದ ನಟರಾಜು ಎಂಬುವರು ತಮ್ಮ ಪತ್ನಿ ಕಾಣೆಯಾಗಿದ್ದಾಳೆ ಎಂದು ತಿ.ನರಸೀಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದೀಗ ಗೃಹಿಣಿ ಬಿಜಾಪುರದ ಬಸವನ ಬಾಗೇವಾಡಿಯಲ್ಲಿ ಪ್ರಿಯಕರನೊಂದಿಗೆ ಪತ್ತೆಯಾಗಿದ್ದು, ನನಗೆ ಪತಿ ಬೇಡ, ಪ್ರೇಮಿ ಬೇಕು ಎನ್ನುತ್ತಿದ್ದಾಳೆ.
ಏನಿದು ಘಟನೆ?:ತಿ.ನರಸೀಪುರ ಪಟ್ಟಣದ ಟೀ ಕ್ಯಾಂಟೀನ್ ಮಾಲೀಕ ಎಸ್.ನಟರಾಜು ಅವರು ಕಳೆದ 5 ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ದಂಪತಿಗಳಿಗೆ ಮಕ್ಕಳಾಗಿರಲಿಲ್ಲ. ನವೆಂಬರ್ 30 ರಂದು ನನ್ನ ಪತ್ನಿ ಕಾಣೆಯಾಗಿದ್ದಾಳೆ ಎಂದು ಪಟ್ಟಣ ಪೊಲೀಸ್ ಠಾಣೆಯಲ್ಲಿ ನಟರಾಜು ದೂರು ನೀಡಿದ್ದ.
ಈ ಕುರಿತು ತನಿಖೆ ಕೈಗೊಂಡ ಪೊಲೀಸರು ಮೊಬೈಲ್ ಟವರ್ ಮೂಲಕ ಗೃಹಿಣಿಯನ್ನು ಪತ್ತೆ ಹಚ್ಚಿದ್ದು, ಆಕೆ ಬಿಜಾಪುರದ ಬಸವನ ಬಾಗೇವಾಡಿಯಲ್ಲಿ ತನ್ನ ಪ್ರಿಯಕರ ರಮೇಶ್ ಎಂಬಾತನೊಂದಿಗೆ ಇರುವುದು ತಿಳಿದುಬಂದಿದೆ. ನಂತರ ಪ್ರೇಮಿಗಳಿಬ್ಬರನ್ನು ತಿ.ನರಸೀಪುರ ಪಟ್ಟಣ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದಾಗ ಫೇಸ್ ಬುಕ್ ಪ್ರೀತಿ ವಿಷಯ ಹೊರಬಿದ್ದಿದೆ.
ವಿವಾಹಿತ ಮಹಿಳೆ ಮತ್ತು ರಮೇಶ್ ಕಳೆದ 4 ವರ್ಷಗಳ ಹಿಂದೆ ಫೇಸ್ಬುಕ್ನಲ್ಲಿ ಪರಿಚಯವಾಗಿದ್ದರು. ಪರಿಚಯ ಪ್ರೇಮಕ್ಕೆ ತಿರುಗಿ, ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ಅಂತಿಮವಾಗಿ ಈ ವಿವಾಹಿತ ಮಹಿಳೆ ತನ್ನ ಪ್ರೇಮಿ ರಮೇಶ್ ಜೊತೆ ಹೋಗಲು ನಿರ್ಧರಿಸಿದ್ದು, ಆತನನ್ನು ನರಸೀಪುರಕ್ಕೆ ಕರೆಸಿಕೊಂಡು ನಂತರ ಇಬ್ಬರು ಪರಾರಿಯಾಗಿದ್ದರು.
ಪೊಲೀಸರು ವಿಚಾರಣೆಗೊಳಪಡಿಸಿದಾಗ ನಟರಾಜು ನನ್ನನ್ನು ಮದುವೆಯಾದಾಗಿನಿಂದ ಚೆನ್ನಾಗಿ ನೋಡಿಕೊಂಡಿಲ್ಲ. ನನ್ನ ಬೇಕು ಬೇಡಗಳನ್ನು ಕೇಳುತ್ತಿರಲಿಲ್ಲ, ಆದ್ದರಿಂದ ನಾನು ರಮೇಶ್ ಜೊತೆಗೆ ಹೋಗಲು ನಿರ್ಧರಿಸಿದೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ. ಸದ್ಯಕ್ಕೆ ಈ ವಿವಾಹಿತೆಯನ್ನು ಪೊಲೀಸರು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಲು ಚಿಂತನೆ ನಡೆಸಿದ್ದಾರೆ.