ಮಂಗಳೂರು: ಲಾಕ್ಡೌನ್ ಬಳಿಕ ಸ್ಥಗಿತಗೊಂಡಿದ್ದ ಖಾಸಗಿ ಬಸ್ ಸಂಚಾರ ನಾಳೆಯಿಂದ ಆರಂಭವಾಗಲಿದೆ. ಬಸ್ ಆರಂಭದ ಖುಷಿಯ ಜೊತೆಗೆ 20% ಪ್ರಯಾಣ ದರ ಹೆಚ್ಚಳವಾಗಲಿದೆ.
ನಾಳೆಯಿಂದ ಖಾಸಗಿ ಬಸ್ ಸಂಚಾರ ಆರಂಭ: ಶೇ 20 ಪ್ರಯಾಣ ದರ ಹೆಚ್ಚಳ - ಖಾಸಗಿ ಬಸ್ ಸಂಚಾರ ನಾಳೆಯಿಂದ ಆರಂಭ
ಮಂಗಳೂರಿನಲ್ಲಿ ಎರಡು ತಿಂಗಳಿಂದ ಸ್ಥಗಿತಗೊಂಡಿದ್ದ ಖಾಸಗಿ ಬಸ್ ಸಂಚಾರ ನಾಳೆಯಿಂದ ಆರಂಭವಾಗುತ್ತಿದ್ದು, ಶೇ 20ರಷ್ಟು ಪ್ರಯಾಣ ದರ ಹೆಚ್ಚಳ ಮಾಡಲಾಗಿದೆ.
ವಾರದ ಹಿಂದೆ ಲಾಕ್ಡೌನ್ ಸಡಿಲಿಕೆ ಮಾಡಿದ ಜಿಲ್ಲಾಡಳಿತ ಬಸ್ ಸಂಚಾರಕ್ಕೆ ಅನುಮತಿ ನೀಡಿತ್ತು. ಆದರೆ ಸ್ಥಗಿತಗೊಂಡಿದ್ದ ಬಸ್ ಸಂಚಾರವನ್ನು ಏಕಾಏಕಿ ಆರಂಭಿಸಲು ಕರಾವಳಿಯಲ್ಲಿ ಖಾಸಗಿ ಬಸ್ ಮಾಲೀಕರು ನಿರಾಕರಿಸಿದ್ದರು. ಬಸ್ಗಳು ಓಡಾಟ ಮಾಡದೆ ನಿಂತಿದ್ದ ಕಾರಣ ಅದರ ನಿರ್ವಹಣೆ ಮತ್ತು ತಿಂಗಳ ಮಧ್ಯೆ ಬಸ್ ಓಡಾಟ ಮಾಡಿದರೆ ತೆರಿಗೆ ಪಾವತಿಸಬೇಕಾದ ಹಿನ್ನೆಲೆಯಲ್ಲಿ ಜುಲೈ 1 ರಿಂದ ಬಸ್ ಸಂಚಾರ ಆರಂಭಿಸುವುದಾಗಿ ನಿರ್ಧರಿಸಿದ್ದರು.
ಇನ್ನು ಬಸ್ನಲ್ಲಿ 50% ಪ್ರಯಾಣಿಕರನ್ನು ಮಾತ್ರ ಕರೆದುಕೊಂಡು ಹೋಗಬೇಕಿರುವುದರಿಂದ ಬಸ್ ಪ್ರಯಾಣ ದರ ಹೆಚ್ಚಿಸಲು ಬಸ್ ಮಾಲೀಕರು ಒತ್ತಾಯಿಸಿದ್ದರು. ಇತ್ತೀಚೆಗೆ ಸಾರಿಗೆ ಪ್ರಾಧಿಕಾರದ ಜೊತೆ ಬಸ್ ಮಾಲೀಕರು ನಡೆಸಿದ ಸಭೆಯಲ್ಲಿ ಕೊರೊನಾ ಲಾಕ್ಡೌನ್ ನಿಯಮಾವಳಿ ಇರುವವರಗೆ ಈಗಿರುವ ಬಸ್ ಪ್ರಯಾಣ ದರವನ್ನು ಶೇಕಡಾ 20 ಹೆಚ್ಚಿಸಲು ಅನುಮತಿ ನೀಡಲಾಗಿದೆ.