ಮಂಗಳೂರು: ದೇಶಾದ್ಯಂತ ಕೊರೊನಾ ಸೋಂಕಿತರ ಸೇವೆ ಮಾಡುವ ಮೂಲಕ ಪ್ರಶಂಸೆಗೆ ಪಾತ್ರರಾದ ನಟ ಸೋನುಸೂದ್ ಮಂಗಳೂರು ಸುತ್ತಮುತ್ತಲಿನ ಪ್ರದೇಶಗಳಿಗೆ ಆಕ್ಸಿಜನ್ ಕೊರತೆಯಾಗದಂತೆ ಯೋಜನೆಯನ್ನು ರೂಪಿಸಿದ್ದಾರೆ.
ನಟ ಸೋನು ಸೂದ್ ಮತ್ತು ಸ್ವಾಗ್ ಬೈಕ್ಸ್ ಸಂಸ್ಥೆ ಕರ್ನಾಟಕದಲ್ಲಿ ರೈಲ್ವೆ ಪೊಲೀಸರ ಮೂಲಕ ಕೊರೊನಾ ಸೋಂಕಿತರಿಗೆ ಆಕ್ಸಿಜನ್ ಪೂರೈಸುವ ಮಹತ್ವದ ಕಾರ್ಯಕ್ಕೆ ಕೈ ಹಾಕಿದ್ದಾರೆ. ರಾಜ್ಯದ ಪ್ರತಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಆಕ್ಸಿಜನ್ ವ್ಯವಸ್ಥೆ ಮಾಡುವ ಮೂಲಕ ಎಲ್ಲರಿಗೂ ಸನಿಹದಲ್ಲಿ ಆಕ್ಸಿಜನ್ ಸಿಗಬೇಕೆಂಬುದು ಉದ್ದೇಶ. ಅದರಂತೆ ಮಂಗಳೂರಿಗೆ 1 ಸಾವಿರ ಲೀಟರ್ ನ 10 ಮತ್ತು 7 ಸಾವಿರ ಲೀಟರ್ ನ 10 ಸಿಲಿಂಡರ್ಗಳ ವ್ಯವಸ್ಥೆ ಮಾಡಲಾಗಿದೆ.
ಸೋನು ಸೂದ್ ಅವರ ಟ್ರಸ್ಟ್ ನ ಕಾಲ್ ಸೆಂಟರ್ಗೆ ಬಂದ ಕರೆಯ ಆಧಾರದಲ್ಲಿ ಕೊರೊನಾ ಸೋಂಕಿತರಿಗೆ ಆಕ್ಸಿಜನ್ ಸಿಲಿಂಡರ್ ನೀಡಲಾಗುತ್ತಿದೆ. ಕಾಲ್ಸೆಂಟರ್ ನಿಂದ ಆಕ್ಸಿಜನ್ ನೀಡಲು ಮಂಜೂರಾದ ತಕ್ಷಣ ಮಂಗಳೂರಿನ ರೈಲ್ವೆ ಪೊಲೀಸರು ಸೋಂಕಿತರಿಗೆ ಆಕ್ಸಿಜನ್ ಸಿಲಿಂಡರ್ ಅನ್ನು ತಲುಪಿಸಲಿದ್ದಾರೆ.
ಮಂಗಳೂರಿಗೆ ಸೋನು ಸೂದ್ ಸಹಾಯಹಸ್ತ ಆಕ್ಷಿಜನ್ ಸಿಲಿಂಡರ್ ಅನ್ನು ಹೇಗೆ ಉಪಯೋಗಿಸುವುದು ಎಂಬುದರ ತರಬೇತಿಯನ್ನು ಸೋನು ಸೂದ್ ಟ್ರಸ್ಟ್ ಮತ್ತು ಸ್ವಾಗ್ ಬೈಕ್ಸ್ ಸಂಸ್ಥೆ ರೈಲ್ವೆ ಪೊಲೀಸರಿಗೆ ನೀಡಿದೆ. ಪೊಲೀಸ್ ಸೇವೆಯ ಜೊತೆಗೆ ವೈದ್ಯಕೀಯ ಸೇವೆ ನೀಡಲು ತರಬೇತಿ ಹೊಂದಿದ ರೈಲ್ವೆ ಪೊಲೀಸರು ಸಂತಸಗೊಂಡಿದ್ದಾರೆ. ಇದೇ ವೇಳೆ, ಸೋನು ಸೂದ್ ಅವರು ವಿಡಿಯೋ ಕಾಲ್ ಮೂಲಕ ರೈಲ್ವೆ ಪೊಲೀಸರಿಗೆ ಶುಭಹಾರೈಸಿದ್ದಾರೆ.