ಮಂಗಳೂರು: ನಗರದ ಕದ್ರಿ ಕಂಬಳ ರಸ್ತೆಯಲ್ಲಿ ಸ್ಕೂಟರ್ ಹಾಗೂ ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವತಿಯನ್ನು ಶಾಸಕ ಯು.ಟಿ.ಖಾದರ್ ತಮ್ಮದೇ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ತೀವ್ರ ಗಾಯಗೊಂಡಿದ್ದ ಯುವತಿಯನ್ನು ತನ್ನ ಕಾರಿನಲ್ಲೇ ಆಸ್ಪತ್ರೆಗೆ ದಾಖಲಿಸಿದ ಶಾಸಕ ಖಾದರ್ - mangalore news
ಮಂಗಳೂರಿನ ಕದ್ರಿ ಕಂಬಳ ರಸ್ತೆಯಲ್ಲಿ ಸ್ಕೂಟರ್ ಹಾಗೂ ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವತಿಯನ್ನು ಶಾಸಕ ಯು.ಟಿ.ಖಾದರ್ ತಮ್ಮದೇ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಪುತ್ತೂರು ಕೆದಿಲ ನಿವಾಸಿ ವಾಣಿಶ್ರೀ ಭಟ್ (22) ಗಾಯಗೊಂಡ ಯುವತಿ. ಶುಕ್ರವಾರ ಬೆಳಗ್ಗೆ ನಗರದ ಕದ್ರಿ ಕಂಬಳದಲ್ಲಿ ರಸ್ತೆಯಲ್ಲಿ ವಾಣಿಶ್ರೀ ಚಲಾಯಿಸುತ್ತಿದ್ದ ಸ್ಕೂಟರ್ ಹಾಗೂ ಕಾರೊಂದರ ನಡುವೆ ಅಪಘಾತ ಸಂಭವಿಸಿತ್ತು. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಯುವತಿಯನ್ನು ಕಾರು ಕೆಲವು ಮೀಟರ್ ದೂರದವರೆಗೆ ಎಳೆದೊಯ್ದಿತ್ತು. ಈ ವೇಳೆ ಅದೇ ದಾರಿಯಲ್ಲಿ ಸಾಗುತ್ತಿದ್ದ ಶಾಸಕ ಖಾದರ್ ಅಪಘಾತ ಕಂಡು ಕಾರು ನಿಲ್ಲಿಸಿ, ತಮ್ಮ ಕಾರಿನಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವತಿಯನ್ನು ಕರೆದುಕೊಂಡು ಹೋಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಪಘಾತದ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ, ತಕ್ಷಣ ನೆರವಿಗೆ ಬಂದು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿರುವ ಶಾಸಕ ಖಾದರ್ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ಕುರಿತು ಕದ್ರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.