ಮಂಗಳೂರು :ಮಳಲಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ವಿಹೆಚ್ಪಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸುವಂತೆ ಸಲ್ಲಿಸಿದ ಅರ್ಜಿಯ ವಿಚಾರಣೆ ಮಂಗಳೂರಿನ ಮೂರನೇ ಹೆಚ್ಚುವರಿ ನ್ಯಾಯಾಲಯ ನಾಳೆಗೆ ಮುಂದೂಡಿದೆ.
ಏಪ್ರಿಲ್ 21ರಂದು ಮಂಗಳೂರು ನಗರದ ಹೊರವಲಯದ ಗಂಜಿಮಠ ಬಳಿಯ ಮಳಲಿ ಮಸೀದಿಯ ನವೀಕರಣದ ಕಾಮಗಾರಿ ವೇಳೆ ದೇಗುಲ ಶೈಲಿ ಪತ್ತೆಯಾಗಿತ್ತು. ಈ ಬಗ್ಗೆ ವಿಶ್ವ ಹಿಂದೂ ಪರಿಷತ್ ನ್ಯಾಯಾಲಯದ ಮೆಟ್ಟಿಲೇರಿತ್ತು.
ನ್ಯಾಯಾಲಯವು ಕಾಮಗಾರಿಗೆ ತಡೆಯಾಜ್ಞೆ ನೀಡಿ ಮುಂದಿನ ವಿಚಾರಣೆಯನ್ನು ಜೂನ್ 3ಕ್ಕೆ ನಿಗದಿಪಡಿಸಿತ್ತು. ಇದರ ಮಧ್ಯೆ ಮಳಲಿಯ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ಮಸೀದಿ ಆಡಳಿತದಿಂದ ವಿಶ್ವ ಹಿಂದೂ ಪರಿಷತ್ ಅರ್ಜಿಯನ್ನು ವಜಾಗೊಳಿಸುವಂತೆ ಅರ್ಜಿಯನ್ನು ಸಲ್ಲಿಸಿತ್ತು. ಈ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಾಲಯ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.