ಮಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಖಿಲ ಭಾರತ ಹಿಂದೂ ಮಹಾಸಭಾದ ಅಧ್ಯಕ್ಷ ಸಹಿತ ಉಳಿದ ಮೂವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.
ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ಕುಳಾಯಿ ನಿವಾಸಿ ರಾಜೇಶ್ ಪವಿತ್ರನ್ (40), ಅಡ್ಕಾರು ನಿವಾಸಿ ಸಂದೀಪ್ ಗಣೇಶ್ ಶೆಟ್ಟಿ (40), ಬಂಟ್ವಾಳದ ಕರಿಯಂಗಳ ನಿವಾಸಿ ಪ್ರೇಮ್ ರಾಜೇಶ್ ಶೆಟ್ಟಿ (48) ಬಂಧಿತ ಆರೋಪಿಗಳು. ಈಗಾಗಲೇ ಉರ್ವ ನಿವಾಸಿ, ಅಖಿಲ ಭಾರತ ಹಿಂದೂ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ (53) ಅವರನ್ನು ಭಾನುವಾರವೇ ಬಂಧಿಸಲಾಗಿದೆ.
ಮೈಸೂರಿನಲ್ಲಿ ದೇವಾಲಯ ಕೆಡವಿರುವ ಹಿನ್ನೆಲೆಯಲ್ಲಿ ಶುಕ್ರವಾರ ಖಾಸಗಿ ಹೊಟೇಲೊಂದರಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಧರ್ಮೇಂದ್ರ ಅವರು, "ಗಾಂಧೀಜಿಯವರನ್ನು ಹತ್ಯೆ ಮಾಡಲು ಸಾಧ್ಯವಾಗುತ್ತದೆ ಎಂದ ಮೇಲೆ ನಿಮ್ಮ ವಿಚಾರದಲ್ಲಿ ಸಾಧ್ಯವಿಲ್ಲ ಅಂತೀರಾ?" ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ನಿನ್ನೆ ಲೋಹಿತ್ ಕುಮಾರ್ ಸುವರ್ಣ ಸಿಎಂಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆ ಅಖಿಲ ಭಾರತ ಹಿಂದೂ ಮಹಾಸಭಾದ 8 ಮಂದಿಯ ಮೇಲೆ ದೂರು ದಾಖಲಿಸಿದ್ದರು.
ಶುಕ್ರವಾರ ಅಖಿಲ ಭಾರತ ಹಿಂದೂ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರರನ್ನು ಬಂಧಿಸಲಾಗಿತ್ತು. ಉಳಿದ ಮೂವರನ್ನು ಪೊಲೀಸರು ನಿನ್ನೆ ಕೇವಲ ವಶಕ್ಕೆ ಪಡೆದುಕೊಂಡಿದ್ದರು.
ಆದರೆ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಇಂದು ಉಳಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇನ್ನು ನಾಲ್ವರ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅವರನ್ನು ಇನ್ನಷ್ಟೇ ಬಂಧನವಾಗಬೇಕಿದೆ. ಉಳಿದ ಆರೋಪಿಗಳಾದ ಕಮಲಾಕ್ಷ ಪಡೀಲ್, ಸುಧಾಕರ್ ಶೆಟ್ಟಿ, ಪ್ರವೀಣ್ ಶೆಟ್ಟಿ, ಉಲ್ಲಾಸ್ ಎಂಬವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.