ಮಂಗಳೂರು:ಮಾಜಿ ಕೇಂದ್ರ ಸಚಿವ ಧನಂಜಯ ಕುಮಾರ್ ಇಂದು ಮಧ್ಯಾಹ್ನ 1.30 ಕ್ಕೆ ನಗರದ ಯುನಿಟಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮಾಜಿ ವಿಮಾನಯಾನ ಸಚಿವ ಧನಂಜಯಕುಮಾರ್ ಇನ್ನಿಲ್ಲ - ಮಾಜಿ ಕೇಂದ್ರ ಸಚಿವ ಧನಂಜಯ ಕುಮಾರ್
ವಾಜಪೇಯಿ ಅವರ ಸರಕಾರದಲ್ಲಿ ಕೇಂದ್ರ ವಿಮಾನಯಾನ ಖಾತೆಯ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಮಾಜಿ ಕೇಂದ್ರ ಸಚಿವ ಧನಂಜಯ ಕುಮಾರ್ ಇಂದು ನಿಧನರಾಗಿದ್ದಾರೆ
ಕಳೆದ ಕೆಲವು ಸಮಯಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಕೊನೆಯುಸಿರೆಳೆದಿದ್ದಾರೆ.ನಾಳೆ ಬೆಳಗ್ಗೆ 7 ಗಂಟೆಯಿಂದ 10 ರವರೆಗೆ ನಗರದ ಕದ್ರಿಕಂಬಳದಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕರಿಗೆ ಪಾರ್ಥೀವ ಶರೀರದ ಅಂತಿಮ ದರ್ಶನ ನಡೆಯಲಿದೆ. ವೇಣೂರಿನಲ್ಲಿ ಅಂತಿಮ ಸಂಸ್ಕಾರ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ.
ಧನಂಜಯಕುಮಾರ್ ಅವರು ಮಂಗಳೂರು ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಬಿಜೆಪಿಯಿಂದ ಆಯ್ಕೆಯಾಗಿದ್ದರು. ವಾಜಪೇಯಿ ಅವರ ಸರಕಾರದಲ್ಲಿ ಕೇಂದ್ರ ವಿಮಾನಯಾನ ಖಾತೆಯ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಅವರು ಬಿಜೆಪಿ ಸರಕಾರದಲ್ಲಿ ಉನ್ನತ ಸ್ಥಾನ ಪಡೆದಿದ್ದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಆಪ್ತರಾಗಿದ್ದ ಅವರು ಕೆಜೆಪಿ ಪಕ್ಷ ಸ್ಥಾಪನೆಯಾದಾಗ, ಬಿಜೆಪಿ ತ್ಯಜಿಸಿದ್ದರು. ಆದರೆ ಯಡಿಯೂರಪ್ಪ ಬಿಜೆಪಿ ಮತ್ತೆ ಸೇರಿದಾಗ ಧನಂಜಯಕುಮಾರ್ ಅವರನ್ನು ಬಿಜೆಪಿ ಸೇರ್ಪಡೆಗೊಳಿಸಿರಲಿಲ್ಲ.
ಬಳಿಕ ಕೆಲ ಸಮಯ ರಾಜಕೀಯದಿಂದ ದೂರವಿದ್ದ ಧನಂಜಯಕುಮಾರ್, ನಂತರ ಕಾಂಗ್ರೆಸ್ ಸೇರ್ಪಡೆಯಾದರು. ಆದರೆ ಕಾಂಗ್ರೆಸ್ನಲ್ಲಿ ಅವರಿಗೆ ಮುಂಚೂಣಿಗೆ ಬರಲು ಸಾಧ್ಯವಾಗಲಿಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮಂಗಳೂರಿನ ಯುನಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.