ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ 5 ಸಾವಿನ ಪ್ರಕರಣಗಳನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು. ತಜ್ಞ ವೈದ್ಯರ ತಂಡ ಇದ್ದರೂ ಯಾಕೆ ಈ ಸಾವುಗಳು ಸಂಭವಿಸಿವೆ ಎಂಬುದರ ಬಗ್ಗೆ ಜನರಿಗೆ ಸ್ಪಷ್ಟನೆ ನೀಡಬೇಕು ಎಂದು ಶಾಸಕ ಯು.ಟಿ. ಖಾದರ್ ಆಗ್ರಹಿಸಿದ್ದಾರೆ.
ಸೋಂಕು ಇರುವಿಕೆ ದೃಢಪಟ್ಟು ಮೂರು ದಿನಗಳಲ್ಲೇ ಮೃತಪಡುತ್ತಿರುವುದರ ಬಗ್ಗೆ ಆರೋಗ್ಯ ಇಲಾಖೆ ತನಿಖೆ ನಡೆಸಬೇಕು. ಜಿಲ್ಲಾಡಳಿತವೂ ಎಚ್ಚೆತ್ತುಕೊಂಡು ಸೋಂಕಿತರ ಮೂಲ ಪತ್ತೆಹಚ್ಚುವ ಕೆಲಸ ಮಾಡಬೇಕಿದೆ. ವಿದೇಶದಿಂದ ಬಂದವರು, ವಲಸೆ ಕಾರ್ಮಿಕರ ಬಗ್ಗೆ ಯಾವುದೇ ಸಮರ್ಪಕ ನಿರ್ಧಾರ ಇಲ್ಲ. ಕಿಟ್ ಕೊಟ್ಟ ಮಾತ್ರಕ್ಕೆ ವೈರಸ್ ಹೋಗುವುದಿಲ್ಲ. ವೈರಸ್ ನಿಗ್ರಹಕ್ಕೆ ಏನು ಕ್ರಮಕೈಗೊಳ್ಳಲಾಗಿದೆ ಎಂಬುದನ್ನು ಬಹಿರಂಗಪಡಿಸಲಿ ಎಂದರು.
ಕೊರೊನಾ ಸೋಂಕಿನಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾದವರಿಗೆ ಎಲ್ಲಾ ದೇಶಗಳಲ್ಲಿ ಪ್ಯಾಕೇಜ್ ಘೋಷಣೆ ಮಾಡಿದಂತೆ ಪ್ರಧಾನಿ ಮೋದಿ ಅವರು 20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಿಸಿದ್ದಾರೆ. ಈ ಪ್ಯಾಕೇಜ್ನಲ್ಲಿ ಸಾಲ ಕೊಡುವ ವಿಚಾರವಿದೆಯೇ ಹೊರತು ಬಡ್ಡಿ ಮನ್ನಾ ಮಾಡುವ ವಿಚಾರವಿಲ್ಲ. ಮೋದಿ ಅವರು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಲ್ಲಿ ಎಲ್ಲರ ಬ್ಯಾಂಕ್ ಖಾತೆಗಗಳಿಗೆ 15 ಲಕ್ಷ ರೂ. ಹಾಕುತ್ತೇವೆ ಎಂದಿದ್ದರು.ಈಗ ಕನಿಷ್ಠ 15,000 ರೂ. ಆದರು ಹಾಕಲಿ ಎಂದು ಹೇಳಿದರು.
ವಿದೇಶದಿಂದ ಜನರನ್ನು ಕರೆತರುವಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕಡೆಗಣಿಸಲಾಗಿದೆ. ವಂದೇ ಭಾರತ್ ಮಿಷನ್ನಲ್ಲಿ ಮಂಗಳೂರು ವಿಮಾನ ನಿಲ್ದಾಣ ಕಡೆಗಣನೆಯಾಗಿದ್ದು, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರ ಮುತುವರ್ಜಿಯಿಂದ ಕೇವಲ ಒಂದು ವಿಮಾನ ಬಂದಿದೆ. ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಹತ್ತಾರು ವಿಮಾನಗಳು ಬರುತ್ತಿವೆ. ಮಂಗಳೂರು ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ವಿಮಾನಗಳು ಬಾರದೆ ಇರುವುದಕ್ಕೆ ಸಂಸದರ ವೈಫಲ್ಯವೇ ಕಾರಣ ಎಂದು ಖಾದರ್ ಆರೋಪಿಸಿದರು.