ಮಂಗಳೂರು: ಕಾಂಗ್ರೆಸ್ ನಾಯಕರ ಗೊಂದಲಗಳಿಂದ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಹೇಳಿದ್ದಾರೆ.
ಮಂಗಳೂರು ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ: ಜನಾರ್ದನ ಪೂಜಾರಿ ಭವಿಷ್ಯ ನಗರದ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಿಗೆ ಏನು ಮಾಡಬೇಕೆಂದು ತಿಳಿದಿಲ್ಲ. ಇವರ ಗೊಂದಲಗಳಿಂದ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಅರ್ಥ ಆಗದಿದ್ದರೆ ಸಾಯ್ತಾರೆ. ಅದರೊಂದಿಗೆ ನಾನೂ ಸಾಯುತ್ತೇನೆ. ನವೆಂಬರ್ 14ರಂದು ಕ್ರೂಷಲ್ ಡೇ. ಜನರು ದಡ್ಡರಲ್ಲ ಎಂದರು.
ಇನ್ನು, ಉಪ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬಾರದಿದ್ದಲ್ಲಿ ಬಿಜೆಪಿ ಸರ್ಕಾರ ಉಳಿಸಲು ಜೆಡಿಎಸ್ ಸಹಾಯ ಮಾಡುತ್ತದೆ ಎಂಬ ವದಂತಿಗಳಿವೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಪ್ರಶ್ನೆಯನ್ನು ದೇವೇಗೌಡರು ಬಂದಾಗ ಕೇಳಿ. ಅವರು ಅದೇ ರೀತಿ ಉತ್ತರಿಸಿದ್ದಲ್ಲಿ, ಮರುದಿನ ನಾನು ಪತ್ರಿಕಾಗೋಷ್ಠಿ ಕರೆದು ದೇವೇಗೌಡರ ವಿರುದ್ಧವೇ ಹೇಳಿಕೆ ನೀಡುತ್ತೇನೆ. ರಾಜಕೀಯ ವ್ಯಕ್ತಿಗಳನ್ನ ಜನರು ನಂಬುವುದಿಲ್ಲ. ಪರಿಸ್ಥಿತಿ ಎಲ್ಲಿಯವರೆಗೆ ಬಂದಿದೆ ಎಂದರೆ, ಜನಾರ್ದನ ಪೂಜಾರಿಯನ್ನೂ ನಂಬುವುದಿಲ್ಲ. ಅಲ್ಲಿಯವರೆಗೆ ಬಂದು ಮುಟ್ಟಿದೆ. ಎಲ್ಲಾ ರಾಜಕೀಯ ಪಕ್ಷದವರು ಅಷ್ಟು ಮಾಡಿ ಬಿಟ್ಟಿದ್ದಾರೆ ಎಂದರು.
ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಾರ್ ಮತ್ತು ವೈನ್ ಶಾಪ್ಗಳಿಗೆ ದೇವರ ಹೆಸರುಗಳನ್ನು ಇಡುವುದನ್ನು ತೆಗೆದುಹಾಕಬೇಕೆಂಬ ಪ್ರಸ್ತಾಪವನ್ನ ಅಧಿಕಾರಿಗಳ ಮುಂದಿರಿಸಿರುವುದಕ್ಕೆ ಪ್ರತಿಕ್ರಿಯಿಸಿದ ಜನಾರ್ದನ ಪೂಜಾರಿ, ಮುಜರಾಯಿ ಸಚಿವರು ತೆಗೆದುಕೊಂಡ ನಿರ್ಧಾರ ಸರಿಯಾಗಿದೆ. ಈ ಬಗ್ಗೆ ಸರ್ಕಾರ ಕಠಿಣ ಕಾನೂನು ಜಾರಿಗೆ ತರಲಿ ಎಂದು ಆಗ್ರಹಿಸಿದರು.