ಮಂಗಳೂರು: ಎಟಿಎಂಗೆ ಸ್ಕಿಮ್ಮಿಂಗ್ ಮೆಷಿನ್ ಅಳವಡಿಸಿ ಬ್ಯಾಂಕ್ ಗ್ರಾಹಕರ ಖಾತೆಯಿಂದ ಹಣ ದೋಚುತ್ತಿದ್ದ ಖದೀಮರನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ಕೇರಳದ ಗ್ಲಾಡಿವಿನ್ ಜಿಂಟೋ ಜೋಯ್ ಯಾನೆ ಜಿಂಟು (37), ದೆಹಲಿಯ ದಿನೇಶ್ ಸಿಂಗ್ ರಾವತ್ (44), ಕೇರಳದ ಕಾಸರಗೋಡು ಜಿಲ್ಲೆಯ ಅಬ್ದುಲ್ ಮಜೀದ್ (27), ಕೇರಳದ ರಾಹುಲ್ ಟಿಎಸ್ (24) ಬಂಧಿತ ಆರೋಪಿಗಳು. ಖದೀಮರು ಬಂಧನ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದು, ಈ ವೇಳೆ ಆರೋಪಿ ಅಜ್ಮಲ್ ಗಾಯಗೊಂಡಿದ್ದಾನೆ. ಸದ್ಯ ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಡಿಸ್ಚಾರ್ಜ್ ಬಳಿಕ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಆರೋಪಿ ಗ್ಲಾಡಿವಿನ್ ಜಿಂಟೋ ಜೋಯ್ ಪ್ರಮುಖ ಆರೋಪಿಯಾಗಿದ್ದು ಈತ ಆನ್ಲೈನ್ನಲ್ಲಿ ಸ್ಕಿಮ್ಮಿಂಗ್ ಮೆಷಿನ್ ಉಪಕರಣ ತರಿಸಿಕೊಂಡು ದೇಶದ ವಿವಿಧೆಡೆ ವಂಚನೆಗೆ ಮುಂದಾಗಿದ್ದ. ಸ್ಕಿಮ್ಮಿಂಗ್ ಉಪಕರಣವನ್ನು ಎಟಿಎಂ ಕಾರ್ಡ್ ಹಾಕುವ ಜಾಗಕ್ಕೆ ಹಾಕಿ ಬಳಕೆದಾರರು ಬಳಸಿದ ಎಟಿಎಂ ಕಾರ್ಡ್ ಡೇಟಾವನ್ನು ಮೆಮೊರಿ ಕಾರ್ಡ್ಗೆ ವರ್ಗಾಯಿಸುತ್ತಿದ್ದನು. ಅದೇ ರೀತಿ ಪಿನ್ ನಮೂದಿಸುವ ಜಾಗದಲ್ಲಿ ಸ್ಪೈ ಕ್ಯಾಮರಾ ಇರುವ ಎರಡು ತೆಳುವಾದ ವಸ್ತುಗಳನ್ನು ಅನುಮಾನ ಬಾರದಂತೆ ಜೋಡಿಸಿ ಅದರ ಪಿನ್ ನಂಬರ್ ತಿಳಿದುಕೊಳ್ಳುತ್ತಿದ್ದನು.
ಬಳಿಕ ಎಟಿಎಂ ಕಾರ್ಡ್ ತಯಾರಿಸಿ ಅದರಿಂದ ಹಣವನ್ನು ಗ್ರಾಹಕರ ಗಮನಕ್ಕೆ ಬಾರದಂತೆ ಲಪಟಾಯಿಸುತ್ತಿದ್ದನು. ಇವನು ಏಕಾಂಗಿಯಾಗಿ ಈ ಕಾರ್ಯ ಮಾಡುತ್ತಿದ್ದು, ಬೇರೆ ಬೇರೆ ಕಡೆ ಹೋಗುವ ಸಂದರ್ಭದಲ್ಲಿ ಅಲ್ಲಿ ಸಿಗುವ ಕೆಲವರನ್ನು ಬಳಸಿಕೊಂಡು ಕೃತ್ಯವೆಸಗುತ್ತಿದ್ದನು. ಎಟಿಎಂಗೆ ಹಣ ತುಂಬಿಸುವ ಸಿಬ್ಬಂದಿ ಬಂದು ಹೋದ ಬಳಿಕ ಎಟಿಎಂಗೆ ಸ್ಕಿಮ್ಮಿಂಗ್ ಮೆಷಿನ್ ಅಳವಡಿಸುತ್ತಿದ್ದ. ಮರುದಿನ ಹಣ ತುಂಬಿಸುವ ಸಿಬ್ಬಂದಿ ಎಟಿಎಂಗೆ ಬರುವ ಮುಂಚೆ ಅದನ್ನು ಕೊಂಡೊಯ್ಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ನಗರದಲ್ಲಿ ಜನವರಿ ತಿಂಗಳಿನಿಂದ ಗ್ರಾಹಕರ ಗಮನಕ್ಕೆ ಬಾರದಂತೆ ಹಣ ಮಾಯವಾಗುವ 22 ಪ್ರಕರಣಗಳು ದಾಖಲಾಗಿವೆ. ಈ ಆರೋಪಿಗಳು ಕಳೆದ ನವೆಂಬರ್ನಿಂದ 60 ಖಾತೆಗೆ ಕನ್ನ ಹಾಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಈ ಹಿಂದೆಯೂ ಇಂಥ ಪ್ರಕರಣದಲ್ಲಿ ಇವರು ಭಾಗಿಯಾಗಿರುವ ಬಗ್ಗೆ ತನಿಖೆ ನಡೆಯುತ್ತಿದೆ. ಸ್ಕಿಮ್ಮಿಂಗ್ ಮೂಲಕ ಇವರು 30 ಲಕ್ಷಕ್ಕೂ ಹೆಚ್ಚು ಹಣ ಲಪಟಾಯಿಸಿರುವ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ. ಸೆಕ್ಯೂರಿಟಿ ಗಾರ್ಡ್ ಇಲ್ಲದ ಎಟಿಎಂಗಳಲ್ಲಿ ಇವರು ಕೃತ್ಯ ಮಾಡುತ್ತಿದ್ದು, ಎಟಿಎಂಗಳಲ್ಲಿ ಸೆಕ್ಯುರಿಟಿ ಗಾರ್ಡ್ ನೇಮಿಸುವಂತೆ ಸಂಬಂಧಿಸಿದವರ ಗಮನಕ್ಕೆ ತರಲಾಗಿದೆ ಎಂದು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಹೇಳಿದರು.