ಕಲಬುರಗಿ:ಸಭೆಯಲ್ಲಿ ಪಾಲಿಕೆ ಹಣ ದುರ್ಬಳಕೆಯಾಗುತ್ತಿದೆ ಎಂದು ಆರೋಪ ಕೇಳಿ ಬಂದ ಹಿನ್ನೆಲೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರು ಪರಿಸರ ಅಭಿಯಂತರ ಮುನಾಫ್ ಪಟೇಲ್ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ನಗರದ ಮಹಾನಗರ ಪಾಲಿಕೆಯ ಟೌನ್ಹಾಲ್ನಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸ್ವಚ್ಛತಾ ಕುರಿತಂತೆ ಚರ್ಚೆ ಆರಂಭಗೊಳ್ಳುತ್ತಿದ್ದಂತೆ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಸ್ವಚ್ಛತಾ ಕಾರ್ಯದಲ್ಲಿ ಅಧಿಕಾರಿಗಳು ಹಣ ದುರ್ಬಳಕೆ ಮಾಡುತ್ತಿದ್ದಾರೆ ಎಂದು ದೂರಿದರು.
ಇದಕ್ಕೆ ಉತ್ತರಿಸಿದ ಪರಿಸರ ಅಭಿಯಂತರ ಮುನಾಫ್ ಪಟೇಲ್ 1,168 ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ತಿಂಗಳಿಗೆ ₹ 2.5 ಕೋಟಿ ಖರ್ಚು ಮಾಡಲಾಗುತ್ತಿದೆ. ಪ್ರತಿ ವಾರ್ಡ್ಗೆ ಸರಾಸರಿ 20 ರಿಂದ 25 ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ತಿಪ್ಪಣ್ಣಪ್ಪ ಕಮಕನೂರ ಅವರು, ಅಧಿಕಾರಿ ಹೇಳುತ್ತಿರುವುದು ಶುದ್ಧ ಸುಳ್ಳು. ಕೇವಲ 3-4 ಕಾರ್ಮಿಕರು ಮಾತ್ರ ಒಂದು ವಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಮುನಾಫ್ ಪಟೇಲ್ ಹಣ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಏನು ಹೇಳ್ತಿಯಪ್ಪ ಎಂದು ಸಚಿವರು ಕೇಳಿದಾಗ ಮುನಾಫ್ ಪಟೇಲ್ ಉತ್ತರಿಸಲು ತಡಬಡಾಯಿಸಿದರು.
ಇನ್ನೊಂದು ಸಲ ಜನಪ್ರತಿನಿಧಿಗಳು ಕಂಪ್ಲೇಂಟ್ ಮಾಡಿದ್ರೆ ಸಸ್ಪೆಂಡ್ ಮಾಡ್ತೀನಿ ಹುಷಾರ್. ಸರ್ಕಾರಿ ಹಣ ತೆಗೆದುಕೊಳ್ಳುತ್ತಿಯಾ? ಕೆಲಸ ಮಾಡೋದಕ್ಕೆ ಆಗೋದಿಲ್ವಾ? ವಾರ್ಡ್ ಸಂಖ್ಯೆ 35 ರಲ್ಲಿ 28 ಪೌರ ಕಾರ್ಮಿಕರಿಂದ ಕೆಲಸ ಮಾಡಿಸಲಾಗುತ್ತಿದೆ ಎಂದು ಹೇಳ್ತಿದ್ದಿಯಾ? ಕಮಕನೂರು ಹೇಳುವ ಪ್ರಕಾರ ಕೇವಲ ಮೂವರು ಕೆಲಸ ಮಾಡುತ್ತಿದ್ದಾರೆ. ಅಗತ್ಯ ಮೂಲ ಸೌಕರ್ಯದಲ್ಲಿ ಸ್ಚಚ್ಛತಾ ಕಾರ್ಯ ಪ್ರಮುಖವಾಗಿದೆ. ಇದರಲ್ಲಿ ಆಟ ಆಡುತ್ತಿಯಾ? ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
1168 ಪೌರ ಕಾರ್ಮಿಕರನ್ನು ಇಂದು ಸಾಯಂಕಾಲ ಕರೆಸಿ ಯಾವ ವಾರ್ಡ್‌ನಲ್ಲಿ ಯಾರ್ಯಾರು ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಸದಸ್ಯರಿಗೆ ಮಾಹಿತಿ ಕೊಡಿ ಎಂದು ಅಧಿಕಾರಿಗೆ ಸಚಿವರು ಸೂಚಿಸಿದರು. ಅಲ್ಲದೇ, ಈ ಬಗ್ಗೆ ತನಿಖೆ ನಡೆಸಿ ಎಂದು ಜಿಲ್ಲಾಧಿಕಾರಿಗೆ ಸಚಿವರು ಸೂಚಿಸಿದರು. ಎಸ್ಎಫ್ಸಿ, ರಸ್ತೆ, ಬೀದಿ ದೀಪ, ಆಸ್ತಿ ತೆರಿಗೆ ಸಂಗ್ರಹ, ಜಾಹೀರಾತು, ತೆರಿಗೆ ಸಂಗ್ರಹ ಸೇರಿ ಯೋಜನೆಗಳ ಬಗ್ಗೆ ಚರ್ಚೆ ಮಾಡಲಾಯಿತು.