ಕರ್ನಾಟಕ

karnataka

ETV Bharat / city

ಗುಲ್ಬರ್ಗ ಕೇಂದ್ರೀಯ ವಿವಿ ಗಲಾಟೆ ಪ್ರಕರಣ.. ಓರ್ವ ವಿದ್ಯಾರ್ಥಿ ಅರೆಸ್ಟ್ - ಕಲಬುರಗಿ ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಗಲಾಟೆ

ಕೇಂದ್ರೀಯ ವಿವಿಯಲ್ಲಿ ರಾಮನವಮಿ ಆಚರಿಸಿದ ಹಿನ್ನೆಲೆ ಹಲ್ಲೆ ನಡೆದ ಪ್ರಕರಣ ಸಂಬಂಧ ಓರ್ವ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.

By

Published : Apr 12, 2022, 10:02 AM IST

ಕಲಬುರಗಿ:ರಾಮನವಮಿಯಂದು ಇಲ್ಲಿನ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ರಾಮನವಮಿ ಆಚರಣೆ ಹಿನ್ನೆಲೆ ಎಬಿವಿಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆದ ಪ್ರಕರಣ ಸಂಬಂಧ ಓರ್ವ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಹುಲ್ ಬಂಧಿತ ವಿದ್ಯಾರ್ಥಿ. ಈ ಪ್ರಕರಣ ಸಂಬಂಧ ನಾಲ್ವರ ವಿರುದ್ಧ ಎಫ್​ಐಆರ್ ದಾಖಲಾಗಿದ್ದು, ಸದ್ಯ ಓರ್ವನನ್ನು ನರೋಣಾ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಏಪ್ರಿಲ್ 10 ರಂದು ವಿವಿ ಕ್ಯಾಂಪಸ್​ನಲ್ಲಿ ರಾಮನವಮಿ ಮುಗಿಸಿಕೊಂಡು ಹೋಗುವಾಗ ವಿಶ್ವನಾಥ್ ಮತ್ತು ನರೇಂದ್ರ ಎಂಬುವವರ ಮೇಲೆ ಹಲ್ಲೆ ನಡೆದಿತ್ತು. ಈ ಬಗ್ಗೆ ಹಲ್ಲೆಗೊಳಗಾದ ವಿದ್ಯಾರ್ಥಿಗಳು ನರೋಣಾ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆಳಂದ ತಾಲೂಕಿನ ಕಡಗಂಚಿಯ ಕೇಂದ್ರೀಯ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಗಲಾಟೆ ಖಂಡಿಸಿ ಎಬಿವಿಪಿ ಪ್ರತಿಭಟನೆ ನಡೆಸಿತು.

ರಾಮನವಮಿ ಪ್ರಯುಕ್ತ ಕ್ಯಾಂಪಸ್​​ನಲ್ಲಿನ ಲಕ್ಷ್ಮೀ ದೇವಸ್ಥಾನದಲ್ಲಿ ಆಚರಣೆ ಮಾಡಿದೆವು, ಸುಮಾರು 70-80 ವಿದ್ಯಾರ್ಥಿಗಳು ಭಾಗವಹಿಸಿದ್ದೆವು. ಪ್ರಸಾದ ಸ್ವೀಕರಿಸಿ ತೆರಳುತ್ತಿರುವಾಗ ನಾಲ್ವರು ಯುವಕರು ನಮ್ಮ ಮೇಲೆ ಹಲ್ಲೆ ನಡೆಸಿ, ಕೊಲೆ ಹಾಗೂ ಅಪಹರಣ ಬೆದರಿಕೆ ಹಾಕಿದ್ದಾರೆ. ಆರೋಪಿಗಳು ಮೊದಲೇ ಬಂದು ನಿಂತಿದ್ದು, ನಾಲ್ಕು ಮಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಎಬಿವಿಪಿ ಎಂಬ ಕಾರಣಕ್ಕೆ ಮೊದಲಿನಿಂದಲೂ ನಮಗೆ ಬೆದರಿಕೆ ಹಾಕುತ್ತಿದ್ದರು. ಕ್ಯಾಂಪಸ್​ನಲ್ಲಿ ಯಾವುದೇ ಆಚರಣೆ ನಡೆಸಬಾರದು ಎಂದು ಈ ಹಿಂದಿನಿಂದಲೂ ನಮಗೆ ಬೆದರಿಕೆ ಹಾಕುವುದು ನಡೆಯುತ್ತಿತ್ತು. ಬ್ಲೇಡ್​ನಿಂದ ಕೊಯ್ಯಲಾಗಿದೆ, ಜಗಳ, ಗಲಾಟೆ ನಡೆದಿರುವುದು ಇದೇ ಮೊದಲು. ಈ ಹಿಂದೆ ಯಾವುದೇ ಗಲಾಟೆ ನಡೆದಿರಲಿಲ್ಲ. ಸಾದಿಕ್​, ರಾಹುಲ್,​ ರಾಹುಲ್​ ಆರ್ಯ ಹಾಗೂ ಮತ್ತೋರ್ವ ಯುವಕನಿಂದ ಹಲ್ಲೆ ನಡೆದಿದೆ ಎಂದು ಗಾಯಗೊಂಡ ವಿದ್ಯಾರ್ಥಿ ವಿಶ್ವನಾಥ ಮಾಧ್ಯಮದವರಿಗೆ ಹೇಳಿದ್ದಾರೆ.

ಈ ಬಗ್ಗೆ ಕಲಬುರಗಿ ಎಸ್​ಪಿ ಇಶಾ ಪಂತ್​​ ಪ್ರತಿಕ್ರಿಯಿಸಿದ್ದು, ನಿನ್ನೆ ರಾತ್ರಿಯೇ ರಾಹುಲ್​​, ಸಾದಿಕ್​ ಸೇರಿ ನಾಲ್ವರ ಮೇಲೆ ಎಫ್​ಐಆರ್​​​ ದಾಖಲಾಗಿದೆ. ಪ್ರಾಥಮಿಕ ತನಿಖೆ ನಡೆಸುತ್ತಿದ್ದೇವೆ. ಗಾಯಗೊಂಡ ಎಬಿವಿಪಿ ಕಾರ್ಯಕರ್ತರು ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿದ್ಯಾರ್ಥಿಗಳ ನಡುವೆಯೇ ಗಲಾಟೆ ನಡೆದಿದೆ. ಗಾಯಗೊಂಡವರಿಂದ ಎಲ್ಲ ಮಾಹಿತಿ ಪಡೆದುಕೊಂಡಿದ್ದು, ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details