ಕಲಬುರಗಿ :ಬಡತನದಲ್ಲಿ ಹುಟ್ಟಿದರೂ ಏನಾದ್ರೂ ಸಾಧನೆ ಮಾಡಬೇಕೆಂಬ ಅಚಲವಾದ ಗುರಿಯಿಟ್ಟು ನಿರಂತರ ಪ್ರಯತ್ನದಿಂದ ಪಿಎಸ್‌ಐ ಹುದ್ದೆ ಅಲಂಕರಿಸಿದ ವೀರಭದ್ರ ಎಸ್.ಹೆಚ್ ಅವರು ಇದೀಗ ದಕ್ಷತೆಯಿಂದ ಕಾರ್ಯ ನಿರ್ವಹಿಸಿ ಮುಖ್ಯಮಂತ್ರಿ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಹಸಮಕಲ್ ಗ್ರಾಮದ ಶಿವಪ್ಪ ಹಾಗೂ ಸಿದ್ದಮ್ಮ ದಂಪತಿಯ ಪುತ್ರನಾಗಿ ಜನಿಸಿದ ವೀರಭದ್ರ ಅವರು ಕೆಸರಿನಲ್ಲಿ ಅರಳಿದ ತಾವರೆಯಂತೆ ಬಡತನದಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಹಸಮಕಲ್ ಗ್ರಾಮದಲ್ಲಿ ಹೈಸ್ಕೂಲ್‌ವರೆಗೆ, ಗುಡದೂರದಲ್ಲಿ ಬಿಎ ವ್ಯಾಸಾಂಗ ಮಾಡಿ ಬಾಹ್ಯ ಅಭ್ಯರ್ಥಿಯಾಗಿದ್ದರು.
ಚಿಕ್ಕಂದಿನಿಂದಲೂ ಆಟ ಪಾಠದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ವೀರಭದ್ರ ಅವರು ತಮ್ಮಲ್ಲಿನ ಆಟದ ಕಲೆ ಮತ್ತು ಓದಿನ ಆಸಕ್ತಿಯ ಮೂಲಕವೇ ಪೊಲೀಸ್ ಅಧಿಕಾರಿ ಆಗುವ ಕನಸು ಕಂಡವರು. ಅಚಲವಾದ ಗುರಿ, ನಿರಂತರ ಶ್ರಮದ ಮೂಲಕ ಪೊಲೀಸ್ ಅಧಿಕಾರಿ ಆಗುವ ತಮ್ಮ ಕನಸ್ಸಿಗೆ ನೀರೆರದು 2015ರಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗುವ ಕನಸು ನನಸು ಮಾಡಿಕೊಂಡರು.