ಹುಬ್ಬಳ್ಳಿ:ಕೊರೊನಾ ಮಹಾಮಾರಿಯನ್ನು ಮೆಟ್ಟಿ ನಿಂತು ಸಾರ್ವಜನಿಕ ಸೇವೆ ಮಾಡುತ್ತಿರುವ ಕೊರೊನಾ ಸೇನಾನಿಗಳಿಗೆ ಬೇಕಾದ ಸೌಲಭ್ಯ ಸಿಗುತ್ತಿಲ್ಲ. ಕಿಲ್ಲರ್ ಕೊರೊನಾ ವಿರುದ್ಧ ಶತಾಯಗತಾಯ ಹೋರಾಟ ನಡೆಸುತ್ತಿರುವ ಇವರಿಗೆ ಸೌಲಭ್ಯ ನೀಡುವಲ್ಲಿ ಸರ್ಕಾರ ಮೀನಾಮೇಷ ಎಣಿಸುತ್ತಿದೆ.
ಸೋಂಕಿತರಿಗೆ ಚಿಕಿತ್ಸೆ ನೀಡಲು ರಾಜ್ಯದ ಎಲ್ಲಾ ವೈದ್ಯಕೀಯ ಕಾಲೇಜುಗಳನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೊರೊನಾ ಸೇನಾನಿಗಳಿಗೆ ಮಾತ್ರ ಏಳನೇ ವೇತನ ಆಯೋಗದ ಸೌಲಭ್ಯ ಸಿಗದಂತಾಗಿದೆ.
ಕೊರೊನಾ ಸೇನಾನಿಗಳಿಗೆ ಸಿಗದ ಏಳನೇ ವೇತನ ಆಯೋಗದ ಸೌಲಭ್ಯ ರಾಜ್ಯದಲ್ಲಿ ಒಟ್ಟು 17 ಸರ್ಕಾರಿ ವೈದ್ಯಕೀಯ ಕಾಲೇಜಗಳಿದ್ದು, 10 ಸೂಪರ್ ಸ್ಪೆಷಾಲಿಟಿ ಮತ್ತು ಸ್ವಾಯತ್ತ ಸಂಸ್ಥೆಗಳಿವೆ. ಇವುಗಳಲ್ಲಿ ಸಾವಿರಾರು ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆಲ್ಲ ಏಪ್ರಿಲ್ ತಿಂಗಳಿನಿಂದ ಏಳನೇ ಆಯೋಗದ ವರದಿ ಅನುಸಾರವಾಗಿ ಸಂಬಳವನ್ನು ನೀಡುತ್ತಿಲ್ಲ.
ವೈದ್ಯರಿಗೆ ನೀಡಲು ಏಳನೇ ವೇತನ ಆಯೋಗದ ಅಡಿಯಲ್ಲಿ 137 ಕೋಟಿ ಮೀಸಲು ಇಡಲಾಗಿದೆ. ಖಜಾನೆ-2 ಮೂಲಕ ಸಂಬಳ ನೀಡಲು ಉದ್ದೇಶಿಸಲಾಗಿದೆ. ಹೆಚ್.ಆರ್.ಎಂ.ಎಸ್. ಅಪ್ಲೋಡ್ ಕೂಡ ಮಾಡಲಾಗುತ್ತಿದೆ. ಈ ತರಹದ ತಂತ್ರಾಂಶ ಅಳವಡಿಕೆಯಿಂದಾಗಿ ವಿಳಂಬವಾಗಿದ್ದು, ಏಪ್ರಿಲ್ ತಿಂಗಳಿನಿಂದ ನೀಡಬೇಕಿದ್ದ ಏಳನೇ ವೇತನ ಆಯೋಗದ ವೇತನವನ್ನು ನೀಡಲು ಸಾಧ್ಯವಾಗಿಲ್ಲ. ಅಲ್ಲದೆ ಇದುವರೆಗೂ ಏಳನೇ ವೇತನ ಆಯೋಗದ ವರದಿಯಂತೆ ವೇತನ ವೈದ್ಯಕೀಯ ಸಿಬ್ಬಂದಿಯ ಕೈ ಸೇರಿಲ್ಲ.
ಉತ್ತರ ಕರ್ನಾಟಕದ ಸಂಜೀವಿನಿ ಎಂದೇ ಖ್ಯಾತಿ ಪಡೆದ ಕಿಮ್ಸ್ ಆಸ್ಪತ್ರೆಗೂ ಕೂಡ ಏಳನೇ ವೇತನದ ಸೌಲಭ್ಯ ದೊರೆತಿಲ್ಲ. ಏಳನೇ ವೇತನ ಆಯೋಗದ ವರದಿಯಂತೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಹೆಚ್ಚುವರಿಯಾಗಿ 90 ಲಕ್ಷ ರೂ. ಬರಬೇಕಿದ್ದ ವೇತನ ಕೂಡ ಮೂರು-ನಾಲ್ಕು ತಿಂಗಳು ಕಳೆದರೂ ಕೈ ಸೇರಿಲ್ಲ. ಹೀಗಾಗಿ ಕಿಮ್ಸ್ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದಾರೆ.