ಕರ್ನಾಟಕ

karnataka

ETV Bharat / city

75ನೇ ಸ್ವಾತಂತ್ರ್ಯೋತ್ಸವ.. ಧಾರವಾಡ, ಬೆಳಗಾವಿ, ಗದಗದಲ್ಲಿ ಸಂಭ್ರಮ - ಬೆಳಗಾವಿ ಸ್ವಾತಂತ್ರ್ಯದಿನ ಆಚರಣೆ

ಕೋವಿಡ್​ ನಡುವೆಯೂ ಇಂದು ಧ್ವಜಾರೋಹಣ ಸೂಕ್ತ ಮತ್ತು ಸರಳ ರೀತಿಯಲ್ಲಿ ನೆರವೇರಿದೆ. ಧಾರವಾಡ, ಬೆಳಗಾವಿ, ಗದಗ ಜಿಲ್ಲೆಯಲ್ಲಿ ಸ್ವಾತಂತ್ರ್ಯ ದಿನದ ಆಚರಣೆ ಹೀಗಿತ್ತು.

independence day celebration
ಸ್ವಾತಂತ್ರ್ಯದಿನದ ಸಂಭ್ರಮ

By

Published : Aug 15, 2021, 12:38 PM IST

ಇಂದು ದೇಶದ ಜನತೆ ಸ್ವಾತಂತ್ರ್ಯ ದಿನದ ಅಮೃತ್​ ಮಹೋತ್ಸವ ಆಚರಿಸಿದರು. ಧಾರವಾಡ, ಬೆಳಗಾವಿ ಮತ್ತು ಗದಗ ಜಿಲ್ಲೆಯಲ್ಲಿ ಧ್ವಜಾರೋಹಣದ ಸಂಭ್ರಮ ಹೇಗಿತ್ತು ಅನ್ನೋದನ್ನು ನೋಡೋಣ..

ಧಾರವಾಡ, ಬೆಳಗಾವಿ, ಗದಗದಲ್ಲಿ ಸ್ವಾತಂತ್ರ್ಯದಿನದ ಸಂಭ್ರಮ
  • ಧಾರವಾಡ

ಧಾರವಾಡದ ಆರ್.ಎನ್. ಶೆಟ್ಟಿ ಮೈದಾನದಲ್ಲಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಧ್ವಜಾರೋಹಣ ನೆರವೇರಿಸಿದರು. ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಬಳಿಕ‌ ವಿವಿಧ ದಳಗಳಿಂದ ಗೌರವ ವಂದನೆ ಸ್ವೀಕರಿಸಿ, ಪಥ ಸಂಚಲನ ವೀಕ್ಷಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಿದರು‌.

ಕೊರೊನಾ ವಿರುದ್ಧದ ಹೋರಾಟ:

ಬಳಿಕ ಮಾತನಾಡಿದ ಸಚಿವರು, ಕೊರೊನಾ ವಿರುದ್ಧ ಭಾರತ ಸೇರಿದಂತೆ ಹಲವು ದೇಶಗಳು ಹೋರಾಡುತ್ತಿವೆ. ಮೂರನೇ ಅಲೆ ನಿಯಂತ್ರಣಕ್ಕೆ ಹೋರಾಡಬೇಕಿದೆ. ಇದಕ್ಕೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು. ರಾಷ್ಟ್ರೀಯ ನೇಕಾರರ ದಿನಾಚರಣೆ ಸಂದರ್ಭದಲ್ಲಿ ರೇಷ್ಮೆ, ಹತ್ತಿ ಹಾಗೂ ಉಣ್ಣೆ ವಲಯದ ಕೈಮಗ್ಗ ನೇಕಾರರ ಕುಶಲತೆಯನ್ನು ಗುರುತಿಸಿ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ. ಸುಮಾರು 500 ವರ್ಷಗಳ ಇತಿಹಾಸವಿರುವ ಪಾರಂಪರಿಕ ಜಮಖಾನಾ ನೇಯ್ಗೆಗೆ ನವಲಗುಂದ ಪ್ರಸಿದ್ಧವಾಗಿದೆ. ಆಕರ್ಷಕ ಜಮಖಾನ ನೇಯ್ಗೆಯ ಕೌಶಲ್ಯತೆ ಹಾಗೂ ನೈಪುಣ್ಯತೆಯನ್ನು ಪರಿಗಣಿಸಿ ನವಲಗುಂದದ ಅಕ್ಕಮಹಾದೇವಿ ಕೃಷ್ಣಾ ಬೋಜೇದಾರ ಹಾಗೂ ಪರಜಾನಾ ಹಸನಸಾಬ್ ಶಿರಸಂಗಿ ಅವರಿಗೆ ಕೈಮಗ್ಗ ಮತ್ತು ಜವಳಿ ಇಲಾಖೆಯು ಪ್ರಸಕ್ತ ಸಾಲಿನಲ್ಲಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರಶಸ್ತಿ ವಿಜೇತರನ್ನು ಈ ಸಂದರ್ಭದಲ್ಲಿ ಸಚಿವರು ಅಭಿನಂದಿಸಿದರು.

ಸಂತ್ರಸ್ತರಿಗೆ ಪರಿಹಾರ:

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ 39 ಮನೆಗಳು ಪೂರ್ಣ ಪ್ರಮಾಣದಲ್ಲಿ, 93 ಮನೆಗಳು ಶೇಕಡ 25 ರಿಂದ 75ರಷ್ಟು, 1,622 ಮನೆಗಳು ಅಲ್ಪ ಪ್ರಮಾಣದಲ್ಲಿ ಹಾನಿಯಾಗಿರುವುದು ಸೇರಿ ಒಟ್ಟು 1,754 ಮನೆಗಳು ಹಾನಿಗೀಡಾಗಿವೆ. ಸರ್ಕಾರದ ಮಾರ್ಗಸೂಚಿಗಳನ್ವಯ ಹಾನಿಗೀಡಾದವರಿಗೆ ಪರಿಹಾರದ ಹಣವನ್ನು ನೇರವಾಗಿ ಜಮಾ ಮಾಡಲಾಗುವುದು. ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಗೆ 23 ಸಾವಿರ ಹೆಕ್ಟೇರ್​ಗೂ ಅಧಿಕ ಕೃಷಿ, 276 ಹೆಕ್ಟೇರ್ ಪ್ರದೇಶದ ತೋಟಗಾರಿಕೆ ಬೆಳೆಗಳು ಹಾನಿಯಾಗಿದ್ದು ಸುಮಾರು 144 ಕೋಟಿ ರೂ. ಮೌಲ್ಯದ ಬೆಳೆ ಹಾನಿ ಆಗಿದೆ ಎಂದು ಅಂದಾಜಿಸಲಾಗಿದೆ.

ಮುಂಗಾರು ಹಂಗಾಮಿನಲ್ಲಿ 20 ಸಾವಿರ ಕ್ವಿಂಟಲ್‍ಗೂ ಅಧಿಕ ಬಿತ್ತನೆ ಬೀಜಗಳನ್ನು ರೈತರಿಗೆ ಸಹಾಯಧನದಲ್ಲಿ ಪೂರೈಸಲಾಗಿದೆ. 17 ಸಾವಿರ ಮೆಟ್ರಿಕ್ ಟನ್ ಯೂರಿಯಾ ಸೇರಿದಂತೆ ಸುಮಾರು 37 ಸಾವಿರ ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳನ್ನು ಒದಗಿಸಲಾಗಿದೆ. ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ನಮ್ಮ ನೂತನ ಸರ್ಕಾರ ರೈತರ ಮಕ್ಕಳ ಶಿಷ್ಯವೇತನ ಯೋಜನೆ ಘೋಷಣೆ ಮಾಡಿದೆ. ಎಸ್​ಎಸ್​ಎಲ್​ಸಿ ನಂತರ ಶಿಕ್ಷಣ ಮುಂದುವರೆಸಲು ಈ ವಿದ್ಯಾರ್ಥಿ ಯೋಜನೆ ಪ್ರೋತ್ಸಾಹ ನೀಡಲಿದೆ ಎಂದು ಹೇಳಿದರು.

  • ಬೆಳಗಾವಿ

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಧ್ವಜಾರೋಹಣ ನೆರವೇರಿಸಿ ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಿದರು. ಬಳಿಕ ಪಥ ಸಂಚಲನ ವೀಕ್ಷಿಸಿದರು.

ನಂತರ ಮಾತನಾಡಿದ ಕಾರಜೋಳ, ಸ್ವಾತಂತ್ರ್ಯ ಎಂದರೆ ಸ್ವಾಭಿಮಾನ. ತಮ್ಮ ಬದುಕನ್ನು ಪಣಕ್ಕಿಟ್ಟು ದೇಶಕ್ಕೆ ಇಂತಹ ಸ್ವಾಭಿಮಾನವನ್ನು ತಂದುಕೊಟ್ಟ ಮಹನೀಯರನ್ನು ಸ್ಮರಿಸುವ ಹೆಮ್ಮೆಯ ದಿನ. ಬ್ರಿಟಿಷರ ಕಪಿಮುಷ್ಠಿಯಿಂದ ಅವರ ದರ್ಪ, ದೌರ್ಜನ್ಯದಿಂದ ಭಾರತವನ್ನು ಸ್ವಾತಂತ್ರ್ಯಗೊಳಿಸಲು ಹೋರಾಡಿದ ನಮ್ಮ ಪೂರ್ವಜರ ತ್ಯಾಗ, ಬಲಿದಾನ, ಆತ್ಮಾರ್ಪಣೆಯ ಪ್ರತಿಫಲದಿಂದ ನಾವಿಂದು ಸ್ವತಂತ್ರ ಭಾರತದಲ್ಲಿದ್ದೇವೆ. ತ್ಯಾಗ, ಬಲಿದಾನ, ಧೈರ್ಯ, ಶೌರ್ಯ, ಅಹಿಂಸೆಯ ಮೂಲಕ ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ಹೋರಾಟಗಾರರನ್ನು ಶುದ್ಧ ಮನಸ್ಸಿನಿಂದ ನೆನಪಿಸಿಕೊಳ್ಳುವ ಶುಭ ಸಂದರ್ಭದ ದಿನ ಎಂದು ಬಣ್ಣಿಸಿದರು.

ಗಾಂಧೀಜಿಯವರ ಹೋರಾಟ ಇಡೀ ಜಗತ್ತಿಗೆ ಮಾದರಿ:

ಅಹಿಂಸೆ ಎಂಬ ಅಸ್ತ್ರವನ್ನು ಬಳಸಿ ಭಾರತವನ್ನು ಬ್ರಿಟಿಷರಿಂದ ಬಂಧಮುಕ್ತಗೊಳಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹೋರಾಟ ಇಡೀ ಜಗತ್ತಿಗೆ ಮಾದರಿ. ಇಂದಿಗೂ ಇಡೀ ಜಗತ್ತಿನ ಪ್ರೀತಿ, ಗೌರವ ಆದರ ಅಭಿಮಾನಗಳಿಗೆ ಪಾತ್ರರಾಗುತ್ತಲೇ ಇರುವ ರಾಷ್ಟ್ರಪಿತನ ನಾಡಿನಲ್ಲಿ ಜನಿಸಿರುವ ನಾವೇ ಪುಣ್ಯವಂತರು, ಭಾಗ್ಯವಂತರು. ಮಹಾನ್ ಮಾನವತಾವಾದಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರು ‘ಇತಿಹಾಸ ಮರೆತವರು ಭವಿಷ್ಯವನ್ನು ಸೃಷ್ಟಿಸಲಾರರು’ ಎಂಬ ಮಾತು ಎಲ್ಲ ಕಾಲಕ್ಕೂ ನಮಗೆ ಮಾರ್ಗದರ್ಶಿಯಾಗುತ್ತಲೇ ಇರುತ್ತದೆ. ವಿವಿಧತೆಯಲ್ಲಿ ಏಕತೆ, ಏಕತೆಯಲ್ಲಿ ಅಖಂಡತೆಯನ್ನು ಪ್ರತಿಪಾದಿಸುವ ನಮ್ಮ ದೇಶ ಸಾಮರಸ್ಯದ ಬದುಕಿಗೆ ಹೆಸರುವಾಸಿ ಎಂದರು.

ಬೆಳಗಾವಿ ಜಿಲ್ಲೆಯ ಪಾತ್ರ:

ಸ್ವಾತಂತ್ರ್ಯ ಹೋರಾಟಕ್ಕೆ ಕನ್ನಡಿಗರ ಕೊಡುಗೆ ಅಪಾರ. ಸ್ವಾತಂತ್ರ್ಯ ಹೋರಾಟದಲ್ಲಿ ಬೆಳಗಾವಿ ಜಿಲ್ಲೆಯ ಪಾತ್ರವು ಪ್ರಮುಖವಾಗಿದೆ. ಅಪ್ರತಿಮ ಹೋರಾಟಗಾರರು, ಅಪ್ಪಟ ದೇಶಭಕ್ತರು, ಸ್ವಾಭಿಮಾನಿ ಸೇನಾನಿಗಳನ್ನು ದೇಶಕ್ಕೆ ಕೊಡುಗೆ ನೀಡಿರುವ ನಮ್ಮ ಜಿಲ್ಲೆಯು ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿತ್ತು. ಕಿತ್ತೂರು ರಾಣಿ ಚೆನ್ನಮ್ಮ ಮೊಳಗಿಸಿದ ಸ್ವಾತಂತ್ರ್ಯದ ಕಹಳೆಯು ಕಾಡ್ಗಿಚ್ಚಿನಂತೆ ಎಲ್ಲೆಡೆ ಹಬ್ಬಿತು. ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿದ್ದ ಚೆನ್ನಮ್ಮ, ಆಂಗ್ಲರ ಈಸ್ಟ್ ಇಂಡಿಯಾ ಕಂಪನಿಗೆ ದುಸ್ವಪ್ನವಾಗಿ ಕಾಡಿದ್ದರು‌. ಅದೇ ಕಿತ್ತೂರು ಸಂಸ್ಥಾನದಲ್ಲಿ ಸೇನಾಧಿಪತಿಯಾಗಿದ್ದ ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣ ಆಂಗ್ಲರ ಬಂದೂಕುಗಳಿಗೆ ಬೆದರದೆ ತಾಯ್ನಾಡಿನ ಸ್ವಾತಂತ್ರ್ಯಕ್ಕಾಗಿ ನೇಣುಗಂಬಕ್ಕೇರಿದ ಅಪ್ರತಿಮ ದೇಶಭಕ್ತ. ಅಂತಹ ರಾಯಣ್ಣ ಹುಟ್ಟಿದ್ದು ಆಗಸ್ಟ್ 15ರ ವಿಶೇಷ ದಿನವಾಗಿದೆ ಎಂದರು.

ಪ್ರಧಾನಿ ಮಾರ್ಗದರ್ಶನದಲ್ಲಿ ಮುನ್ನೆಚ್ಚರಿಕೆ ಕ್ರಮ:

ಕೊರೊನಾ ವೈರಸ್ ಜಗತ್ತಿನ ಹಲವು ರಾಷ್ಟ್ರಗಳಿಗೆ ವ್ಯಾಪಿಸಿದಂತೆ, ಭಾರತ ದೇಶಕ್ಕೂ ಪ್ರವೇಶಿಸಿ ಭೀಕರ ಪರಿಣಾಮವನ್ನು ಉಂಟುಮಾಡಿತು. ಜನಪ್ರಿಯ ಹಾಗೂ ಸಮರ್ಥ ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ನಮ್ಮ ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿತು. ಪರಿಹಾರೋಪಾಯ ಕಾರ್ಯಗಳನ್ನು ಕೈಗೊಂಡು ಇಡೀ ದೇಶಕ್ಕೆ ಮಾದರಿಯಾಗಿದೆ. ಕೊರೊನಾ ಸಂಕಷ್ಟದಿಂದ ಪಾರುಮಾಡಿ, ಸಣ್ಣ, ಅತಿ ಸಣ್ಣ ಉದ್ಯಮಿಗಳಿಗೆ, ಎಲ್ಲ ವರ್ಗದವರ ಏಳಿಗೆಗಾಗಿ, ದೇಶದ ಪ್ರಗತಿಗೆ ಪೂರಕವಾಗಿ ಆತ್ಮನಿರ್ಭರತೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ದೇಶದಾದ್ಯಂತ ಜನಮನ್ನಣೆ ಪಡೆಯಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸೋಂಕು ತಡೆಗೆ ಕ್ರಮ:

ಬೆಳಗಾವಿ ಜಿಲ್ಲೆಯಲ್ಲಿ ಸೋಂಕಿತರ ಪರೀಕ್ಷೆ, ಚಿಕಿತ್ಸೆ ಹಾಗೂ ಸೋಂಕಿತರಿಂದ ಸಂಪರ್ಕಕ್ಕೆ ಬಂದವರ ಸಮೀಕ್ಷೆಗಳ ಬಗ್ಗೆ ತೀವ್ರ ನಿಗಾ ಇಟ್ಟು, ಸೋಂಕು ಹರಡದಂತೆ ಕ್ರಮ ಜರುಗಿಸಲಾಗುತ್ತಿದೆ. ವೈರಸ್ ವಿರುದ್ಧ ಹೋರಾಟಕ್ಕೆ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಶ್ರಮಿಸಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಅಚ್ಚುಕಟ್ಟಾಗಿ ಅನುಷ್ಠಾನಗೊಳಿದೆ. ಸಂಶಯಾಸ್ಪದ ರೋಗಿಗಳ ಗಂಟಲು ದ್ರವ ಮಾದರಿ ತಪಾಸಣೆ ಮಾಡಿ, ಸೋಂಕಿತರಿಗೆ ಉಚಿತ ಚಿಕಿತ್ಸೆ ಹಾಗೂ ಉಪಚಾರವನ್ನೂ ನೀಡಲಾಗಿದೆ. ಕೋವಿಡ್ ಲಸಿಕೆಯನ್ನು ಯಶಸ್ವಿಯಾಗಿ ನೀಡಲಾಗುತ್ತಿದೆ. ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಎಲ್ಲ ಇಲಾಖೆಗಳ ಕಾರ್ಯನಿರ್ವಹಣೆ ಶ್ಲಾಘನೀಯವಾಗಿದೆ. ಕೋವಿಡ್ ನಿಯಂತ್ರಣಕ್ಕಾಗಿ ನಿರ್ಬಂಧ ಜಾರಿಗೊಳಿಸಲಾದ ಅವಧಿಯಲ್ಲಿ ಸಂಕಷ್ಟಕ್ಕೊಳಗಾದ ಸಾಂಪ್ರದಾಯಿಕ ಕಸುಬು ನಡೆಸುತ್ತಿರುವವರಿಗೆ, ನೇಕಾರರಿಗೆ, ಹೂ, ಹಣ್ಣು ತರಕಾರಿ ಬೆಳೆಗಾರರಿಗೆ, ಕಲಾವಿದರಿಗೆ ಪರಿಹಾರಧನವನ್ನು ನೀಡಲಾಗಿದೆ ಎಂದು ವಿವರಿಸಿದರು.

ಸಂತ್ರಸ್ತರಿಗೆ ಆಶ್ರಯ:

ಜಿಲ್ಲೆಯಲ್ಲಿ ಜುಲೈ 22, 2021 ರಿಂದ ಆಗಸ್ಟ್ 5, 2021 ರವರೆಗೆ ಉಂಟಾದ ಅತಿವೃಷ್ಟಿ / ಪ್ರವಾಹದಿಂದ 14 ತಾಲೂಕುಗಳ 201 ಗ್ರಾಮಗಳು ಬಾಧಿತಗೊಂಡಿವೆ. 1,50,015 ಜನರನ್ನು ಹಾಗೂ 67,329 ಜಾನುವಾರುಗಳನ್ನು ರಕ್ಷಿಸಲಾಗಿದೆ. ಸಂತ್ರಸ್ತರಿಗೆ ತಾತ್ಕಾಲಿಕ ಆಶ್ರಯ ಒದಗಿಸಲು ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಸಂತ್ರಸ್ತರಿಗೆ ಆಶ್ರಯ ಒದಗಿಸಿ ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗಿದೆ. ಜಾನುವಾರುಗಳಿಗೂ ಆಶ್ರಯ ಕಲ್ಪಿಸಲಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಒಟ್ಟಾರೆ 2,800 ಕೋಟಿ ರೂಪಾಯಿಯಷ್ಟು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಸುಮಾರು 1,15,661 ಹೆಕ್ಟೇರ್ ಪ್ರದೇಶ ಬಾಧಿತ ಕ್ಷೇತ್ರವೆಂದು ಅಂದಾಜಿಸಲಾಗಿದೆ. ಜಂಟಿ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿರುತ್ತದೆ ಎಂದು ಸಚಿವರು ತಿಳಿಸಿದರು.

  • ಗದಗ

ನಗರದ ಕೆ.ಹೆಚ್ ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ಸ್ವಾತಂತ್ರ್ಯ ದಿನ ಆಚರಣೆ ಮಾಡಲಾಯಿತು. ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ ಸಿ ಪಾಟೀಲ್ ಧ್ವಜಾರೋಹಣ ನೆರವೇರಿಸಿದರು. ಬಳಿಕ ಗೌರವ ವಂದನೆ ಸ್ವೀಕರಿಸಿದರು. ಜೊತೆಗೆ ಪೊಲೀಸ್ ಇಲಾಖೆಯ ವಿವಿಧ ತುಕಡಿಗಳು ಆಕರ್ಷಕ ಪಥ ಸಂಚಲನ ನಡೆಸಿದರು.

ಇದನ್ನೂ ಓದಿ:ಆಜಾದಿ ಕಾ ಅಮೃತ್​ ಮಹೋತ್ಸವ್​.. ಜಿಲ್ಲೆಗಳಲ್ಲಿ ಆಚರಣೆ ಹೀಗಿತ್ತು

ಬಳಿಕ ಸ್ವಾತಂತ್ರ್ಯ ದಿನಾಚರಣೆ ಉದ್ದೇಶಿಸಿ ಮಾತನಾಡಿದ ಸಚಿವ ಸಿ ಸಿ ಪಾಟೀಲ್, ಇಂದು ನಮಗೆಲ್ಲ ಸಂಭ್ರಮದ ದಿನ. ದೇಶಕ್ಕೆ ಸ್ವಾತಂತ್ರ್ಯ ತಂದು ಜೀವಿಸಲು ಅವಕಾಶ ಮಾಡಿಕೊಟ್ಟ ಹೋರಾಟಗಾರರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಆಗಿದೆ ಎಂದರು. ಇದೇ ವೇಳೆ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಲ್ಲಿ ಆಗಿರುವ ಅಭಿವೃದ್ಧಿ ಬಗ್ಗೆ ವಿವರಿಸಿದರು‌. ಜೊತೆಗೆ ಪಕ್ಷಭೇದ ಮರೆತು ಕೋವಿಡ್ ನಿರ್ವಹಣೆಗೆ ಎಲ್ಲರೂ ಸಾಥ್ ನೀಡಿದ್ದಾರೆ ಎಂದು ಹೇಳಿದರು.

ABOUT THE AUTHOR

...view details