ಹುಬ್ಬಳ್ಳಿ: ದೇಶದಾದ್ಯಂತ ಕೊರೊನಾ ಹಾವಳಿ ದಿನೇ ದಿನೆ ಹೆಚ್ಚಾಗ್ತಿದೆ. ಸೋಂಕು ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹರಸಾಹಸ ಪಡುತ್ತಿವೆ. ಇದಕ್ಕೆ ಪೂರಕವೆಂಬಂತೆ ಕಳೆದ ಮೂರು ತಿಂಗಳ ಹಿಂದಷ್ಟೇ ಕೈಜೋಡಿಸಿದ್ದ ರೈಲ್ವೆ ಇಲಾಖೆಯ ಸಹಾಯ ಪಡೆಯಲು ಜಿಲ್ಲಾಡಳಿತ ಚಿಂತನೆ ನಡೆಸುತ್ತಿದೆ.
ದೇಶಾದ್ಯಂತ ಹಲವೆಡೆ ಆಸ್ಪತ್ರೆಗಳಲ್ಲಿ ಐಸೋಲೇಷನ್ ವಾರ್ಡ್ಗಳ ಕೊರತೆ ಹಿನ್ನೆಲೆ ರೈಲು ಬೋಗಿಗಳನ್ನೇ ಐಸೋಲೇಷನ್ ವಾರ್ಡ್ಗಳನ್ನಾಗಿ ಪರಿವರ್ತನೆ ಮಾಡಲಾಗಿತ್ತು. ಜಿಲ್ಲೆಯಲ್ಲಿ ಕೂಡ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವುದರಿಂದ ಮೂರು ತಿಂಗಳಿನಿಂದ ಕಾರ್ಯನಿರ್ವಹಿಸದೆ ವರ್ಕ್ ಶಾಪ್ನಲ್ಲಿಯೇ ಉಳಿದುಕೊಂಡಿದ್ದ ಐಸೋಲೇಷನ್ ಬೋಗಿಗಳ ಬಳಕೆಗೆ ಜಿಲ್ಲಾಡಳಿತ ಈಗಾಗಲೇ ನೈಋತ್ಯ ರೈಲ್ವೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದೆ.