ಹುಬ್ಬಳ್ಳಿ :ಹುಬ್ಬಳ್ಳಿ-ಧಾರವಾಡರಾಜ್ಯದ ಎರಡನೇ ಅತಿ ದೊಡ್ಡ ಮಹಾನಗರ ಪಾಲಿಕೆ ಹೊಂದಿದೆ. ಮಹಾನಗರ ಪಾಲಿಕೆಗೆ 38 ತಿಂಗಳ ಬಳಿಕ ಜನಪ್ರತಿನಿಧಿಗಳ ಆಗಮನವಾಗುತ್ತಿದೆ. ಮೇ 28ಕ್ಕೆ ಪಾಲಿಕೆಯ ನೂತನ ಮೇಯರ್ ಹಾಗೂ ಉಪ ಮೇಯರ್ ಆಯ್ಕೆ ಚುನಾವಣೆಗೆ ದಿನ ನಿಗದಿಯಾಗಿದೆ. ಆದರೆ, ಚುನಾವಣೆ ನಡೆಸಲು ಸ್ಥಳ ಯಾವುದು ಎಂಬುದು ನಿರ್ಧಾರವಾಗಿಲ್ಲ.
ಬಿಜೆಪಿ 39, ಕಾಂಗ್ರೆಸ್ 33, ಪಕ್ಷೇತರರು 6, ಎಐಎಂಐಎಂ 3, ಜೆಡಿಎಸ್ 1 ಸ್ಥಾನಗಳಲ್ಲಿ ಜಯ ಗಳಿಸಿದೆ. ಇವರಿಗೆಲ್ಲ ಪ್ರತ್ಯೇಕವಾಗಿ ಆಸನ ವ್ಯವಸ್ಥೆ ಕಲ್ಪಿಸುವುದು ಈಗ ಸವಾಲಿನ ಕೆಲಸವಾಗಿದೆ. ಸದ್ಯ ಈಗ ಇರುವ ಕೇಂದ್ರ ಕಚೇರಿಯ ಸಭಾಭವನದಲ್ಲಿ ಇಷ್ಟೊಂದು ಸದಸ್ಯರಿಗೆ ಸ್ಥಳವನ್ನು ಕಲ್ಪಿಸುವುದು ಸಾಧ್ಯವಿಲ್ಲ. ಮೇಯರ್-ಉಪ ಮೇಯರ್ ಆಯ್ಕೆ ವೇಳೆ ಮತಾಧಿಕಾರವಿರುವ ಸಂಸದರು, ಶಾಸಕರು ಭಾಗಿಯಾಗಿರುವ ಕಾರಣ ಬೇರೆ ಸ್ಥಳ ಹುಡುಕುವುದು ಅನಿವಾರ್ಯ.
ಈ ಬಾರಿ ಪಾಲಿಕೆ ಸದಸ್ಯರ ಸಂಖ್ಯೆ 67ರಿಂದ 82ಕ್ಕೆ ಏರಿಕೆಯಾಗಿರುವುದರಿಂದ ಸ್ಥಳ ಆಯ್ಕೆ ಕಸರತ್ತು ಮುಂದುವರೆದಿದೆ. ಹಾಲಿ ಸಭಾಭವನದಲ್ಲಿ 76 ಜನ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇದೆ. ಅದು ಸಹ ತುಂಬಾ ಇಕ್ಕಟ್ಟಾಗಿದೆ. ಮೇಯರ್-ಉಪ ಮೇಯರ್ ಆಯ್ಕೆ ಚುನಾವಣೆ ಇಕ್ಕಟ್ಟಾಗಿರುವ ಪಾಲಿಕೆಯ ಕೇಂದ್ರ ಕಚೇರಿಯಲ್ಲೋ ಅಥವಾ ಕನ್ನಡ ಭವನದಲ್ಲೋ ಎಂಬುದನ್ನು ಅಧಿಕಾರಿಗಳು ನಿರ್ಧರಿಸಬೇಕಿದೆ.
ಈ ಬಗ್ಗೆ ಹು-ಧಾ ಪಾಲಿಕೆ ಆಯುಕ್ತ ಡಾ. ಬಿ. ಗೋಪಾಲಕೃಷ್ಣ ಮಾಹಿತಿ ನೀಡಿದ್ದು, ಕನ್ನಡ ಭವನ ಅಥವಾ ಪಾಲಿಕೆಯ ಸಭಾಭವನ ಇವೆರಡರಲ್ಲಿ ಒಂದು ಕಡೆ ಹು-ಧಾ ಮಹಾನಗರ ಪಾಲಿಕೆ ಮೇಯರ್-ಉಪ ಮೇಯರ್ ಆಯ್ಕೆ ಚುನಾವಣೆ ನಡೆಯಲಿದೆ. ಈ ಕುರಿತು ಪಾಲಿಕೆಯ ಆಡಳಿತಾಧಿಕಾರಿಯಾದ ಬೆಳಗಾವಿ ಪ್ರಾದೇಶಿಕ ಆಯುಕ್ತರೊಂದಿಗೆ ಮೇ 16ರಂದು ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ಮೇ 27ರಂದು ಕೇರಳಕ್ಕೆ ಮುಂಗಾರು ಅಪ್ಪಳಿಸುವ ಸಾಧ್ಯತೆ : ಹವಾಮಾನ ಇಲಾಖೆ ಮುನ್ನೆಚ್ಚರಿಕೆ