ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಸೂಕ್ಷ್ಮ ಜೀವಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಹಾಗೂ ಪರಿಸರ ಪ್ರೇಮಿಯಾಗಿರುವ ಡಾ.ಶಿಶುಪಾಲ್ ಎಂಬುವರ ಮನೆ ಒಳ ಹೊರಗೂ ವಿವಿಧ ಬಗೆಯ ಗಿಡಗಳಿಂದ ತುಂಬಿ ಹೋಗಿದೆ. ಪರಿಸರ ಪ್ರೇಮಿಯಾಗಿ ಅರ್ಧ ಜೀವನ ಕಳೆದಿರುವ ಇವರು ತಮ್ಮ ಮನೆಯನ್ನೇ ಒಂದು ತೋಟವಾಗಿ ಪರಿವರ್ತಿಸಿದ್ದಾರೆ.
ಮನೆಯನ್ನೇ ಸಸ್ಯಕಾಶಿಯನ್ನಾಗಿಸಿರುವ ಪ್ರಾಧ್ಯಾಪಕ: ಮನೆಯಂಗಳದಲ್ಲಿವೆ ನೂರಾರು ಬಗೆ ಗಿಡ, ಹೂಗಳು ಮನೆಯ ಹೊರ ಹಾಗೂ ಒಳ ಭಾಗ ಸೇರಿದ್ದಂತೆ ಡೈನಿಂಗ್ ಟೇಬಲ್, ಮನೆಯ ಹಾಲ್‌ನಲ್ಲಿ ವಿವಿಧ ಜಾತಿಯ ಗಿಡಗಳನ್ನು ಬೆಳೆಸಿರುವುದು ನೋಡಿದರೆ ಮಲೆನಾಡಿಗೆ ಬಂದಿದ್ದೇವೆ ಎಂಬಂತೆ ಭಾಸವಾಗುತ್ತದೆ. ಇನ್ನು ಹಲವು ವರ್ಷಗಳಿಂದ ಗಿಡ ಮರಗಳನ್ನು ಬೆಳೆಸುತ್ತಿರುವ ಶಿಶುಪಾಲ್ ಅವರಿಗೆ ಅವರ ಮಡದಿ ಪದ್ಮಲತಾ ಅವರು ಕೂಡ ಸಾಥ್ ನೀಡ್ತಿರುವುದಕ್ಕೆ ಇಡೀ ಮನೆಯನ್ನೇ ಕೈ ತೋಟ ಮಾಡಲು ಪ್ರಮುಖ ಕಾರಣವಾಗಿದೆ.
ದಾವಣಗೆರೆಯ ಎಸ್ಎಸ್ ಬಡಾವಣೆಯಲ್ಲಿರುವ ತಮ್ಮ ನಿವಾಸವನ್ನು ಅಚ್ಚ ಹಸಿರಾಗಿಸಿದ್ದಾರೆ. ಇಡೀ ಮನೆಯಲ್ಲಿ 730 ವಿವಿಧ ಜಾತಿಯ ಗಿಡಗಳಿದ್ದು, ಅದರಲ್ಲಿ 110 ಹೂವಿನ ಗಿಡಗಳಿವೆ. ದಾಳಿಂಬೆ, ಪಪ್ಪಾಯಿ, ಸೀತಾಫಲ, ನಿಂಬೆಹಣ್ಣಿನ ಮರಗಳನ್ನು ಕೂಡ ಕಾಣಬಹುದಾಗಿದೆ. ಇನ್ನು 52 ರೀತಿಯ ದಾಸವಾಳ ಹೂವಿನ ಗಿಡಗಳಿದ್ದು, ಐದು ರೀತಿಯ ಗುಲಾಬಿ ಹಾಗೂ ಐದು ರೀತಿಯ ಮಲ್ಲಿಗೆ ಗಿಡಗಳಿವೆ.
ಇದನ್ನೂ ಓದಿ: ದಾವಣಗೆರೆಯಲ್ಲಿ 'ಮಿಯಾವಾಕಿ ಅರಣ್ಯ ಪದ್ಧತಿ' ಅನುಷ್ಠಾನ: 15 ಕಡೆ ಅರಣ್ಯೀಕರಣ ಮಾಡಲು ಮುಂದಾದ ಪಾಲಿಕೆ
ಈ ಸುಂದರ ಕೈ ತೋಟದಲ್ಲಿ 12 ಆರ್ಕಿಡ್ಸ್, 5 ಡೇಸರ್ಟ್ ರೋಜ್, ತಾವರೆ, 5 ಕ್ಯಾಕ್ಟಸ್ ಇವೆ. ಇದು ಸೇರಿದಂತೆ ಇಡೀ ಮನೆಯಲ್ಲಿ ವಿವಿಧ ರೀತಿಯ ಗಿಡಗಳಿರುವ ತೂಗು ಕುಂಡಗಳಿರುವುದು ನೋಡಲು ಎರಡು ಕಣ್ಣು ಸಾಲದಾಗಿದೆ.
ಇನ್ನು ಮನೆಯ ಒಳ ಭಾಗದಲ್ಲಿ ಫೈಕಸ್, ಪೋತಾಸ್, ಸೇರಿದಂತೆ ಕರ್ನಾಟಕ ರಾಜ್ಯದಂತ್ಯ ದೊರೆಯುವ ಗಿಡಗಳು ಶಿಶುಪಾಲ್ ರವರ ಕೈ ತೋಟದಲ್ಲಿ ಲಭ್ಯವಿವೆ. ಈ ಸುಂದರ ಕೈ ತೋಟಕ್ಕೆ ನೀರುಣಿಸಲು ಮಳೆನೀರಿನ ಕೊಯ್ಲು ಪದ್ಧತಿ ಅಳವಡಿಸಿಕೊಂಡಿರುವ ಅವರು ಐದು ಸಾವಿರ ಲೀಟರ್ ನೀರು ಬಳಕೆ ಮಾಡಿ ನೀರುಣಿಸುತ್ತಿದ್ದಾರೆ.
ಹೂವು, ಹಣ್ಣು, ಗಿಡಗಳನ್ನು ಹೊರತು ಪಡಿಸಿ ಈ ಕೈತೋಟದಲ್ಲಿ ದೊಡ್ಡಪತ್ರೆ, ತುಳಸಿ, ಒಂದ್ ಎಲಗ, ಇನ್ಸಿಲೀನ್ ನಂತಹ ಮೆಡಿಸಿನ್ ಗಿಡಿಗಳು ಲಭ್ಯವಿದ್ದು, ಅವುಗಳನ್ನು ಕೂಡ ಮಕ್ಕಳಂತೆ ಬೆಳೆಸಲಾಗುತ್ತಿದೆ. ಇದಲ್ಲದೇ ಮನೆಯಲ್ಲೇ ಹಕ್ಕಿಗಳಿಗೆ ಗೂಡುಗಳನ್ನು ಕಟ್ಟುವ ಮೂಲಕ ಹಕ್ಕಿಗಳಿಗೆ ಶಿಶುಪಾಲ್ ಅವರು ಆಸರೆಯಾಗಿದ್ದು, ಇಡೀ ಪ್ರದೇಶಕ್ಕೆ ಇವರ ಕೈ ತೋಟ ಆಮ್ಲಜನಕ ಪೂರೈಸುವ ಕಾರ್ಖಾನೆಯಾಗಿದೆ ಎಂಬುದು ವಿಶೇಷ.