ಕರ್ನಾಟಕ

karnataka

ETV Bharat / city

ಕೊರೊನಾ ಚಿಕಿತ್ಸೆಗೆ ಖಾಸಗಿ​​ ಆಸ್ಪತ್ರೆಗಳಲ್ಲಿ ಹೆಚ್ಚಿನ ಹಣ ಪಡೆಯಲಾಗ್ತಿದೆಯಾ?

ಐಎಂಎ, ಖಾಸಗಿ ನರ್ಸಿಂಗ್ ಹೋಂಗಳ ಜೊತೆ ಹತ್ತು ಬಾರಿ ಸಭೆ ನಡೆಸಿ ಮಾರ್ಗಸೂಚಿ ನೀಡಲಾಗಿದೆ. ಹೆಚ್ಚಿನ ಹಣ ಪಡೆದ ಬಗ್ಗೆ ನೇರವಾಗಿ ರೋಗಿಗಳಿಂದ ದೂರು ಬಂದರೆ ಜಿಲ್ಲಾಧಿಕಾರಿ ಹಾಗೂ ಆರೋಗ್ಯ ಇಲಾಖೆಯಿಂದ ಕಾನೂನು ಕ್ರಮ ಕೈಗೊಳ್ಳಲಾಗುವುದು..

Money
ಹಣ

By

Published : Sep 1, 2020, 4:24 PM IST

ದಾವಣಗೆರೆ:ಜಿಲ್ಲೆಯಲ್ಲಿ ಲಾಕ್​ಡೌನ್ ಅನ್​ಲಾಕ್ ಮಾಡಿದ ಬಳಿಕವಂತೂ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದನ್ನೇ ಲಾಭ ಮಾಡಿಕೊಂಡಿರುವ ದೊಡ್ಡ ದೊಡ್ಡ ಆಸ್ಪತ್ರೆಗಳು, ಖಾಸಗಿ ಕ್ಲಿನಿಕ್​​​ಗಳು, ನರ್ಸಿಂಗ್ ಹೋಮ್​​ಗಳು ಕೊರೊನಾ ಸೋಂಕಿತರಿಂದ ಹೆಚ್ಚಿನ ಹಣ ಪಡೆಯುತ್ತಿವೆ ಎಂಬ ಆರೋಪ ಕೇಳಿ ಬರುತ್ತಿದೆ.

ನಿತ್ಯ 200-300 ಪ್ರಕರಣ ದೃಢಪಡುತ್ತಿವೆ. ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಎಲ್ಲಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗದು. ಇತ್ತ ಖಾಸಗಿ ಆಸ್ಪತ್ರೆಗಳಿಗೆ ಹೋದರೆ ಬೆಡ್ ಇಲ್ಲ ಎಂಬ ಸಬೂಬು ನೀಡಿ ದಾಖಲು ಮಾಡಿಕೊಳ್ಳುತ್ತಿಲ್ಲ. ಇದರಿಂದಾಗಿ ರೋಗಿಗಳನ್ನು ಬೆಂಗಳೂರು, ಉಡುಪಿಯ ಮಣಿಪಾಲ್, ಮಂಗಳೂರಿಗೆ ಕರೆದುಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ.

ದೊಡ್ಡ ಆಸ್ಪತ್ರೆಗಳಲ್ಲಿ ಕೋವಿಡ್ ಟೆಸ್ಟ್ ಸೇರಿ ಇತರೆ ಎಂದು ಲಕ್ಷಗಟ್ಟಲೇ ಹಣ ಪಡೆಯಲಾಗುತ್ತಿದೆ. ಪ್ರಾಣ ಉಳಿದರೆ ಸಾಕು ಎಂಬ ಕಾರಣಕ್ಕೆ ಎಷ್ಟೇ ಕಷ್ಟವಾದರೂ ಹಣ ಹೊಂದಿಸಿ ಕುಟುಂಬದವರು ರೋಗಿಗಳನ್ನು ಸೇರಿಸುತ್ತಾರೆ. ದುಡ್ಡಿದ್ದವರಿಗೆ ಸಮಸ್ಯೆ ಇಲ್ಲ. ಬಡವರು ಎಲ್ಲಿಂದ ಹಣ ತರಬೇಕು ಎಂಬ ಪ್ರಶ್ನೆ ಕಾಡ್ತಿದೆ.

ಈ ಕುರಿತು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಹೆಚ್ ಎಸ್‌ ರಾಘವೇಂದ್ರ ಸ್ವಾಮಿ ಅವರು, ಈವರೆಗೂ ಯಾರಿಂದಲೂ ಲಿಖಿತ ದೂರು ಬಂದಿಲ್ಲ. ದೊಡ್ಡ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಂಗಳಲ್ಲಿ ಹೆಚ್ಚಿನ ಹಣ ಪಡೆಯುತ್ತಿರುವ ಕುರಿತು ಯಾವುದೇ ಬಿಲ್ ಸಮೇತ ದೂರು ಬಂದಿಲ್ಲ. ಆದರೆ, ಆರೋಪಗಳು ಕೇಳಿ ಬರುತ್ತಿರುವುದು ನಿಜ ಎಂದು ಸ್ಪಷ್ಟಪಡಿಸಿದ್ದಾರೆ‌.

ಖಾಸಗಿ ಆಸ್ಪತ್ರೆಗಳಿಂದ ಲೂಟಿ

ಜಿಲ್ಲೆಯಲ್ಲಿ ನಾಲ್ಕು ಕಾರ್ಪೊರೇಟ್ ಆಸ್ಪತ್ರೆಗಳಿವೆ. ಎರಡು ಮೆಡಿಕಲ್‌ ಕಾಲೇಜು, ಎರಡು ನರ್ಸಿಂಗ್ ಹೋಂಗಳು ಹಾಗೂ ಜಿಲ್ಲಾಸ್ಪತ್ರೆ ಇದೆ. ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆ ಅಡಿ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಚಿಕಿತ್ಸೆಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿದೆ. ಉಳಿದವರು ಹಣ ನೀಡಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ಕಾನೂನು ಕ್ರಮ :ಈಗಾಗಲೇ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಐಎಂಎ, ಖಾಸಗಿ ನರ್ಸಿಂಗ್ ಹೋಂಗಳ ಜೊತೆ ಹತ್ತು ಬಾರಿ ಸಭೆ ನಡೆಸಿ ಮಾರ್ಗಸೂಚಿ ನೀಡಲಾಗಿದೆ. ಸರ್ಕಾರಿ ಆಸ್ಪತ್ರೆ ಮಾತ್ರವಲ್ಲ, ಬೇರೆ ಬೇರೆ ಆಸ್ಪತ್ರೆಗಳಲ್ಲಿ ಕೊರೊನಾ ಹಾಗೂ‌ ಇತರ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಹಣ ಪಡೆದ ಬಗ್ಗೆ ನೇರವಾಗಿ ರೋಗಿಗಳಿಂದ ದೂರು ಬಂದರೆ ಜಿಲ್ಲಾಧಿಕಾರಿ ಹಾಗೂ ಆರೋಗ್ಯ ಇಲಾಖೆಯಿಂದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ABOUT THE AUTHOR

...view details