ಕರ್ನಾಟಕ

karnataka

ETV Bharat / city

ಸಾಲ ಕೊಡದಿದ್ರೂ 5 ಕೋಟಿ ವಸೂಲಿಗೆ ಬಂದ ಬ್ಯಾಂಕ್‌ ಅಧಿಕಾರಿ: ಡಿಸಿಸಿ ಮ್ಯಾನೇಜರ್‌ ವಂಚನೆಯ ರೋಚಕ ಕತೆ - 5 ಕೋಟಿ ಸಾಲ ಪಡೆದು ವಂಚನೆ

16 ವರ್ಷಗಳ ಹಿಂದೆಯೇ ಗಂಡಂದಿರನ್ನು ಕಳೆದು ಜೀವನ ನಡೆಸುತ್ತಿದ್ದ ಬಡಪಾಯಿ ಇಬ್ಬರು ಹೆಣ್ಣು ಮಕ್ಕಳ ಹೆಸರಿನಲ್ಲಿ ಕೋಟಿ ಕೋಟಿ ಸಾಲ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ಬ್ಯಾಂಕ್‌ ಸಿಬ್ಬಂದಿ ಸಾಲ ವಸೂಲಿಗೆ ಮನೆಗೆ ಬಂದಾಗ ತಮ್ಮ ಹೆಸರಿನಲ್ಲಿ ಪತಿಯರ ಸೋದರಿ ಸಾಲ ಮಾಡಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

Bank officials who have not lent but come to collection in Davanagere
ಸಾಲ ಕೊಡದಿದ್ದರೂ 5 ಕೋಟಿ ರೂ. ವಸೂಲಿಗೆ ಬಂದ ಬ್ಯಾಂಕ್‌ ಅಧಿಕಾರಿ; ಡಿಸಿಸಿ ಮ್ಯಾನೇಜರ್‌ ವಂಚನೆಯ ರೋಚಕ ಕತೆ ಇದು...

By

Published : Aug 20, 2021, 12:53 PM IST

ದಾವಣಗೆರೆ: ಕೊಡದ ಸಾಲಕ್ಕೆ ಬ್ಯಾಂಕ್ ಅಧಿಕಾರಿಗಳು ವಸೂಲಿಗೆ ಬಂದು ಯಡವಟ್ಟು ಮಾಡಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ‌ ತಾಲೂಕಿನ‌ ದಾಗಿನಕಟ್ಟೆ ಗ್ರಾಮದಲ್ಲಿ ನಡೆದಿದೆ. ಸಾಲ ನೀಡದೆ ಇದ್ದರೂ ಕೂಡ ಶಿವಮೊಗ್ಗದ ಡಿಸಿಸಿ ಬ್ಯಾಂಕ್‌ನ ಸಿಬ್ಬಂದಿ 5 ಕೋಟಿ ರೂ ಸಾಲ ವಸೂಲಿಗೆ ಬಂದಿದ್ದಾರೆ. ದಾಗಿನಕಟ್ಟೆಯಲ್ಲಿ ನಿನ್ನೆ ಈ ಘಟನೆ ನಡೆದಿದೆ.

ದಾಗಿನಕಟ್ಟೆ ಗ್ರಾಮದ ವಿಧವೆಯರಾದ ಗೀತಮ್ಮ, ಸಾವಿತ್ರಮ್ಮ ಎಂಬುವರ ಮನೆಗೆ ಅಧಿಕಾರಿಗಳು ಸಾಲ ವಸೂಲಿಗೆ ಆಗಮಿಸಿ ಹೈರಾಣಾಗಿದ್ದಾರೆ. ಗೀತಮ್ಮ ಎಂಬುವರು 2.4 ಕೋಟಿ ರೂ., ಸಾವಿತ್ರಮ್ಮ ಹೆಸರಲ್ಲಿ‌ 2 ಕೋಟಿ‌ ರೂ. ಸಾಲ ಇದೆ ಎಂದು ಅಧಿಕಾರಿಗಳು ತಿಳಿಸಿದ್ದರಿಂದ ಬಡ ಹೆಣ್ಣು ಮಕ್ಕಳಿಬ್ಬರಿಗೆ ಸಿಡಿಲು ಬಡಿದಂತಾಗಿತ್ತು. 2013-14ನೇ ಸಾಲಿನಲ್ಲಿ ಇಬ್ಬರ ಮಹಿಳೆಯರ ಹೆಸರಿನಲ್ಲಿ‌ ಸಾಲ ಪಡೆದಿದ್ದಾರೆ ಎಂದು ಬ್ಯಾಂಕ್ ಸಿಬ್ಬಂದಿ ವಾದಿಸಿದರೆ, ಬಡ ಹೆಣ್ಣು ಮಕ್ಕಳು ನಾವು ಸಾಲ ತೆಗೆದುಕೊಂಡೇ ಇಲ್ಲ, ಸಾಲದ ಬಗ್ಗೆ ನಮಗೆ ಗೊತ್ತೇ ಇಲ್ಲ ಎಂದು ಹೇಳಿದ್ದಾರೆ.

ಸಾಲ ವಸೂಲಿಗೆ ಬಂದ ಅಧಿಕಾರಿಗಳಿಗೆ ಸ್ಥಳೀಯರ ತರಾಟೆ

ಇದ್ದಕ್ಕಿದ್ದಂತೆ ಬಂದು ಸಾಲ ಕಟ್ಟಿ ಎಂದು ಕುಳಿತಿದ್ದ ಬ್ಯಾಂಕ್ ಅಧಿಕಾರಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಸಾಲ ನೀಡುವಾಗ ಮನೆ ಪರಿಶೀಲನೆ ನಡೆಸದೆ, ಕಳೆದ 8 ವರ್ಷಗಳಿಂದ ಸಾಲದ ಬಗ್ಗೆ ತಕರಾರು ಎತ್ತದೆ ಇದೀಗ ದಿಢೀರನೆ ಮನೆಗೆ ಬಂದು ಸಾಲ ವಸೂಲಾತಿ ಹೇಗೆ ಎಂದು ಇಡೀ ದಾಗೀನಕಟ್ಟೆ ಗ್ರಾಮಸ್ಥರು ಕೆರಳಿದ್ದಾರೆ.

ಘಟನೆ ಹಿನ್ನೆಲೆ ಏನು?
ಗೀತಮ್ಮ, ಸಾವಿತ್ರಮ್ಮ ಸಹೋದರಿಯರಿಬ್ಬರೂ ದಾಗಿನಕಟ್ಟೆಯ ರಂಗಸ್ವಾಮಿ ಹಾಗೂ ಜಗದೀಶ ಎಂಬ ಸಹೋದರರನ್ನು ಮದುವೆಯಾಗಿದ್ದರು. ರಂಗಸ್ವಾಮಿ, ಜಗದೀಶ ಮೃತಪಟ್ಟು 16 ವರ್ಷವಾಗಿದ್ದು, ಇತ್ತ ಈ ಸಹೋದರಿಯರ ಅತ್ತೆ-ಮಾವ ಕೂಡ ಸಾವನ್ನಪ್ಪಿ ಮೂರು ವರ್ಷ ಕಳೆದಿದೆ. ಮನೆತನಕ್ಕೆ 5 ಎಕರೆ ಜಮೀನಿತ್ತಂತೆ. ಜಗದೀಶ್‌ ಸಹೋದರಿ ಶೋಭಾ ಶಿವಮೊಗ್ಗದ ಡಿಸಿಸಿ ಬ್ಯಾಂಕ್‌ ಮ್ಯಾನೇಜರ್ ಆಗಿದ್ರಂತೆ. ಜಗದೀಶ ಬೆಸ್ಕಾಂ ಉದ್ಯೋಗಿಯಾಗಿದ್ದು, ಇಬ್ಬರೂ ಶಿವಮೊಗ್ಗದಲ್ಲಿ ವಾಸವಾಗಿದ್ರಂತೆ.

ಡಿಸಿಸಿ ಮ್ಯಾನೇಜರ್‌ ಆಗಿದ್ದ ಜಗದೀಶ್‌ ಸಹೋದರಿಯಿಂದ ಕೃತ್ಯ

ಇನ್ನು ಶೋಭಾ ಎನ್ನುವರು ಗೀತಮ್ಮ, ಸಾವಿತ್ರಮ್ಮ ಅವರಿಗೆ ವಿಧವಾವೇತನ ಮಾಡಿಸಿಕೊಡುವುದಾಗಿ ಇಬ್ಬರ ಆಧಾರ್ ಕಾರ್ಡ್ ಜೆರಾಕ್ಸ್ ಪಡೆದಿದ್ದಾರೆ. ಇದೇ ಆಧಾರ್ ಕಾರ್ಡ್ ಆಧಾರದಲ್ಲಿ ನಕಲಿ ಚಿನ್ನ ಇಟ್ಟು 4.5 ಕೋಟಿ‌ ಸಾಲ ಪಡೆದಿದ್ದಾರೆ. ಇವರ ಹೆಸರಲ್ಲಿ ಬ್ಯಾಂಕಿನ ಯಾವುದೇ ನೋಟಿಸ್ ಬಂದ್ರೂ ತಮಗೆ ಕಳುಹಿಸುವಂತೆ ಶೋಭಾ ಹೇಳಿದ್ರಂತೆ. ಈ ಘಟನೆ ನಡೆದು 7 ವರ್ಷಗಳೇ ಉರುಳಿದ್ರೂ ಕೂಡ ಈ ಸಾಲದ ಬಗ್ಗೆ ಗೀತಮ್ಮ, ಸಾವಿತ್ರಮ್ಮನಿಗೆ ಮಾಹಿತಿಯೂ‌ ಇರಲಿಲ್ಲ. ಇದೀಗ ಬ್ಯಾಂಕಿನವರು ಮನೆಗೆ ಬಂದಾಗಲೇ ತಮ್ಮ ಹೆಸರಲ್ಲಿ‌ ಶೋಭಾ ಸಾಲ ಮಾಡಿರುವುದು ಗೊತ್ತಾಗಿದೆ. ಈ ಬಗ್ಗೆ ಕೂಲಂಕಷವಾಗಿ ತನಿಖೆಗೆ ಆಗ್ರಹಿಸಿದ್ದಾರೆ. ಬಸವಾಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ABOUT THE AUTHOR

...view details