ಬೆಂಗಳೂರು :ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಆರಂಭದಿಂದಲೂ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣದಲ್ಲಿನ ಆರೋಪಿತರು ಹಾಗೂ ದೂರುದಾರರ ಪರ ಕಾನೂನು ಕ್ಷೇತ್ರದ ಘಟಾನುಘಟಿ ಹಿರಿಯ ವಕೀಲರು ಅಖಾಡಕ್ಕಿಳದ ಮೇಲಂತೂ ಮತ್ತಷ್ಟು ರೋಚಕವಾಗಿದೆ. ಪ್ರಕರಣದ ಹಿನ್ನೆಲೆ ಹಾಗೂ ಕಾನೂನು ಪಂಡಿತರು ಮಂಡಿಸುತ್ತಿರುವ ವಾದಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ರಮೇಶ್ ಜಾರಕಿಹೊಳಿ ಸಿಡಿ ಕೇಸ್ ರಾಜಕೀಯ ವಲಯದಲ್ಲಿ ಅಷ್ಟೇ ಅಲ್ಲ. ಕಾನೂನು ಕ್ಷೇತ್ರದಲ್ಲಿಯೂ ಸಂಚಲನ ಸೃಷ್ಟಿಸಿರುವ ಪ್ರಕರಣ. ಪ್ರಕರಣದ ಸಂತ್ರಸ್ತೆ ಎನ್ನಲಾದ ಯುವತಿ ಅತ್ಯಾಚಾರ ಎಂದು ಆರೋಪಿಸಿದರೆ, ಆರೋಪಿತ ವ್ಯಕ್ತಿಯಾಗಿರುವ ಮಾಜಿ ಸಚಿವ ಹನಿಟ್ರ್ಯಾಪ್ ಎಂದು ಆರೋಪಿಸಿದ್ದಾರೆ. ಹೀಗಾಗಿ, ಪ್ರಕರಣದಲ್ಲಿ ಉಭಯ ಕಕ್ಷಿದಾರರು ಆರೋಪಿತರಾಗಿರುವಂತೆಯೇ ಸಂತ್ರಸ್ತರೂ ಆಗಿದ್ದಾರೆ. ಇಂತಹ ವಿಚಿತ್ರ ಸ್ವರೂಪದ ಪ್ರಕರಣಗಳು ಕಾನೂನು ಕ್ಷೇತ್ರದಲ್ಲಿಯೂ ವಿರಳವಾದ್ದರಿಂದ ಮುಂದಿನ ನಡೆಗಳ ಕುರಿತು ಸಹಜವಾಗಿಯೇ ಕುತೂಹಲ ಹೆಚ್ಚಿಸಿದೆ.
ಆರಂಭದಲ್ಲೇ ಕಾನೂನು ಜಿಜ್ಞಾಸೆ :ಮಾಜಿ ಸಚಿವ ರಮೇಶ್ ಜಾರಕಿಹೊಳಿ ಯುವತಿಯೊಬ್ಬರಿಗೆ ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ದಿನೇಶ್ ಕಲ್ಲಹಳ್ಳಿ ಎಂಬುವರು ಮಾರ್ಚ್‌ನಲ್ಲಿ ಕಬ್ಬನ್ ಪಾರ್ಕ್ ಠಾಣೆಗೂ, ನಗರ ಪೊಲೀಸ್ ಆಯುಕ್ತರಿಗೂ ದೂರು ಕೊಟ್ಟಿದ್ದರು. ಆದರೆ, ಸಂತ್ರಸ್ತೆ ಅಥವಾ ಆಕೆಯ ಕುಟುಂಬದವರಲ್ಲದವರು ನೀಡಿದ ದೂರು ಸ್ವೀಕರಿಸುವ ಹಾಗೂ ಎಫ್ಐಆರ್ ದಾಖಲಿಸುವುದ್ಹೇಗೆ ಎಂಬ ಕಾನೂನು ಸಂಕಟ ಮೊದಲಿಗೆ ಪೊಲೀಸರನ್ನೇ ಕಾಡಿತ್ತು.
ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು : ಆ ಕೂಡಲೇ ಪ್ರಕರಣ ತಿರುವು ಪಡೆದುಕೊಂಡಿತು. ಯುವತಿಯ ಸಹಿಯಿದ್ದ ದೂರಿನ ಪ್ರತಿಯನ್ನು ವಕೀಲ ಜಗದೀಶ್ ಕಪ್ಪು ಕನ್ನಡಕ ಹಾಕಿಕೊಂಡೇ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಹೋಗಿ ಸಲ್ಲಿಸಿದರು. ಆದರೆ, ವ್ಯಾಪ್ತಿ ನಿಯಮಾನುಸಾರ ಕಬ್ಬನ್ ಪಾರ್ಕ್ ಠಾಣೆ ಪೊಲೀಸರೇ ಎಫ್ಐಆರ್ ದಾಖಲಿಸಬೇಕಾಯ್ತು.
ಸದಾಶಿವನಗರ ಠಾಣೆಯಲ್ಲಿ ಪ್ರತಿ ದೂರು :ಅತ್ಯಾಚಾರ ಆರೋಪದಡಿ ಪ್ರಕರಣ ದಾಖಲಾಗುತ್ತಲೇ ರಮೇಶ್ ಜಾರಕಿಹೊಳಿ ಸದಾಶಿವನಗರ ಠಾಣೆಗೆ ಆಪ್ತ ನಾಗರಾಜ್ ಮೂಲಕ ದೂರು ನೀಡಿದರು. ತಮ್ಮನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ನಡೆದಿದೆ. ಆರೋಪಿಗಳು ತನ್ನ ಭಾವಚಿತ್ರ ಹೋಲುವ ನಕಲಿ ಅಶ್ಲೀಲ ಸಿಡಿ ಸೃಷ್ಟಿಸಿ, ಹಣಕ್ಕೆ ಬ್ಲ್ಯಾಕ್‌ಮೇಲ್ ಮಾಡಿದ್ದಾರೆಂದು ಆರೋಪಿಸಿದರು. ಇದರ ನಡುವೆ ಯುವತಿಯ ಪೋಷಕರು ಮಗಳನ್ನು ಅಪಹರಿಸಿರುವ ದೂರು ನೀಡಿದರೂ ಅದು ಬಿ-ರಿಪೋರ್ಟ್‌ನೊಂದಿಗೆ ಕೊನೆಯಾಯ್ತು.
ಪೊಲೀಸರ ವಿಚಾರಣೆ :ಪರಸ್ಪರ ದೂರು, ಪ್ರತಿದೂರು ದಾಖಲಿಸಿದ 2 ಎಫ್ಐಆರ್‌ಗಳ ಮೇರೆಗೆ ಪೊಲೀಸರು ತನಿಖೆ ನಡೆಸಿದಾಗ ಎಲ್ಲ ಆರೋಪಿತರು, ಸಂತ್ರಸ್ತರೂ ಮತ್ತಷ್ಟು ಹೊಸ ಆರೋಪ-ಪ್ರತ್ಯಾರೋಪಗಳನ್ನು ಮಾಡಿದ್ದಾರೆ. ವಿಶೇಷವಾಗಿ ಸಿಡಿಯಲ್ಲಿದ್ದವರು ತಾವಲ್ಲ ಎಂದಿದ್ದವರು ಅದು ನಾವೇ. ಆದರೆ, ಅದಕ್ಕೆ ಬೇರೆಯದೇ ಕಾರಣಗಳಿದ್ದವು. ನಮ್ಮನ್ನು ವಂಚಿಸಲಾಗಿದೆ ಎಂದಿದ್ದಾರೆಂದು ವಿಶೇಷ ನ್ಯಾಯಾಲಯದಲ್ಲಿನ ಜಾಮೀನು ಅರ್ಜಿ ವಿಚಾರಣೆ ವೇಳೆ ಪೊಲೀಸರು ಸಲ್ಲಿಸಿರುವ ಆಕ್ಷೇಪಣೆಯಲ್ಲಿ ಉಲ್ಲೇಖಿಸಲಾಗಿದೆ.
ಪಿಐಎಲ್ ಸಲ್ಲಿಕೆ :ಈ ನಡುವೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಅರ್ಜಿ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ವಿಚಾರಣೆ ಪ್ರಮುಖ ಹಂತಕ್ಕೆ ಬಂದು ತಲುಪಿದೆ. ರಮೇಶ್ ಜಾರಕಿಹೊಳಿ ಪರ ಖ್ಯಾತ ಕ್ರಿಮಿನಲ್ ವಕೀಲರೂ ಆಗಿರುವ ಹಿರಿಯ ನ್ಯಾಯವಾದಿ ಸಿ ವಿ ನಾಗೇಶ್ ವಾದ ಮಂಡನೆಗೆ ಇಳಿದಿದ್ದಾರೆ. ಇದೇ ವೇಳೆ ಪ್ರಕರಣದಲ್ಲಿ ತನ್ನನ್ನೂ ಪ್ರತಿವಾದಿಯಾಗಿ ಸೇರಿಸಿಕೊಳ್ಳಬೇಕು, ತನ್ನ ವಾದವನ್ನೂ ಆಲಿಸಬೇಕು ಎಂದು ಕೋರಿ ಯುವತಿ ಅರ್ಜಿ ಸಲ್ಲಿಸಿದ್ದಾರೆ. ಈಕೆಯ ಪರ ಸುಪ್ರೀಂಕೋರ್ಟ್ ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ ವಾದ ಮಂಡಿಸಲು ಮುಂದಾಗಿದ್ದಾರೆ.
ಸಿವಿ ನಾಗೇಶ್ ವಾದ :ಪ್ರಕರಣ ಸಂಪೂರ್ಣವಾಗಿ ಖಾಸಗಿ ವ್ಯಕ್ತಿಗಳ ನಡುವಿನ ವಿವಾದವಾಗಿದೆ. ಮೇಲಾಗಿ ಇದೊಂದು ಕ್ರಿಮಿನಲ್ ಪ್ರಕರಣ. ಇಂತಹ ಖಾಸಗಿ ಪ್ರಕರಣದಲ್ಲಿ ಯಾವುದೇ ಸಂಬಂಧವಿಲ್ಲದ ಮೂರನೇ ವ್ಯಕ್ತಿಗಳು ತನಿಖೆ ಕೋರಿದ್ದಾರೆ. ಹೀಗಾಗಿ, ಅರ್ಜಿಯನ್ನು ಅರ್ಜಿಯು ಪಿಐಎಲ್ ವ್ಯಾಪ್ತಿಯಲ್ಲಿ ಪರಿಗಣಿಸಬಾರದು ಎಂದು ಕೋರಿದ್ದಾರೆ.
ಇಂದಿರಾ ಜೈಸಿಂಗ್ ವಾದ :ಮೂರನೇ ವ್ಯಕ್ತಿಗಳು ಪ್ರಕರಣವನ್ನು ಸಿಬಿಐ ತನಿಖೆಗೆ ಕೋರುವುದು ಸರಿಯಲ್ಲ ಎಂದು ಹಿರಿಯ ವಕೀಲ ಸಿ ವಿ ನಾಗೇಶ್ ವಾದ ಮಂಡಿಸಿದ ಬಳಿಕ ಅದನ್ನೇ ಲಿಖಿತವಾಗಿ ಸಲ್ಲಿಸಲು ಪೀಠ ಸೂಚಿಸಿತ್ತು. ಈ ಬೆನ್ನಲ್ಲೇ ಪ್ರಕರಣದ ಯುವತಿ ಪರ ವಕೀಲರಾದ ಸಂಕೇತ್ ಏಣಗಿ ತಮ್ಮನ್ನೂ ಅರ್ಜಿಯಲ್ಲಿ ಪ್ರತಿವಾದಿಯಾಗಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ಸಮರ್ಥ ವಾದ ಮಂಡಿಸಲೆಂದೇ ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ ಅವರನ್ನು ನಿಯೋಜಿಸಿಕೊಳ್ಳಲಾಗಿದೆ.
ಪ್ರಕರಣದಲ್ಲಿ ವಾದ ಮಂಡಿಸಿರುವ ಇಂದಿರಾ ಜೈಸಿಂಗ್ ಎಸ್ಐಟಿ ಪೊಲೀಸರ ತನಿಖೆಯೇ ಅನುಮಾನಾಸ್ಪದವಾಗಿದೆ. ಆರೋಪಿಗೆ ಅನುಕೂಲ ಮಾಡಿಕೊಡುವಂತೆ ಪೊಲೀಸರ ತನಿಖೆ ಇರುವುದರಿಂದ ಪ್ರಕರಣವನ್ನು ಮುಚ್ಚಿಹಾಕುವ ಸಾಧ್ಯತೆ ಇದೆ. ಪ್ರಕರಣವನ್ನು ಹೈಕೋರ್ಟ್ ನಿಗಾದಲ್ಲಿ ತನಿಖೆ ನಡೆಸಲೆಂಬ ಉದ್ದೇಶದಿಂದಲೇ ಪ್ರಕರಣದಲ್ಲಿ ಯುವತಿಯನ್ನೂ ಪ್ರತಿವಾದಿಯಾಗಿ ಸೇರಿಸಿಕೊಳ್ಳಬೇಕು. ಹಾಗೂ ಯುವತಿಯ ಹೇಳಿಕೆಯನ್ನೂ ಆಲಿಸಬೇಕು ಎಂದು ಕೋರಿದ್ದಾರೆ.
ಎ.ಎಸ್ ಪೊನ್ನಣ್ಣ ವಾದ :ಸಿಬಿಐ ತನಿಖೆ ಕೋರಿರುವ ಪಿಐಎಲ್ ನಲ್ಲಿ ಹೈಕೋರ್ಟ್‌ನ ಹಿರಿಯ ವಕೀಲ ಎ.ಎಸ್ ಪೊನ್ನಣ್ಣ ವಾದ ಮಂಡಿಸುತ್ತಿಲ್ಲವಾದರೂ, ಪ್ರಕರಣದ ಸೂತ್ರದಾರರು ಎನ್ನಲಾದ ನರೇಶ್‌ಗೌಡ ಹಾಗೂ ಶ್ರವಣ್ ವಿರುದ್ಧ ದಾಖಲಾಗಿರುವ ಬ್ಲ್ಯಾಕ್‌ಮೇಲ್ ಆರೋಪ ಪ್ರಕರಣದಲ್ಲಿ ಎ.ಎಸ್ ಪೊನ್ನಣ್ಣ ವಾದ ಮಂಡಿಸಿದ್ದರು. ಅತ್ಯಾಚಾರ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಕ್ಷಿಸಲು ನರೇಶ್, ಶ್ರವಣ್ ಹಾಗೂ ಯುವತಿಯನ್ನು ಗುರಿಯಾಗಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದಾರೆ ಎಂದು ಪ್ರಬಲವಾಗಿ ವಾದ ಮಂಡಿಸಿದ್ದರು. ಈ ಆಧಾರದಲ್ಲೇ ವಿಚಾರಣಾ ನ್ಯಾಯಾಲಯ ಆರೋಪಿತರಾದ ನರೇಶ್ ಗೌಡ ಹಾಗೂ ಶ್ರವಣ್‌ಗೆ ನಿರೀಕ್ಷಣಾ ಜಾಮೀನು ನೀಡಿದೆ.
ರಾಜಕೀಯ ಪ್ರೇರಿತ ಪ್ರಕರಣ :ಪ್ರಕರಣದಲ್ಲಿ ದಿನೇಶ್ ಕಲ್ಲಹಳ್ಳಿ ಮೊದಲಿಗೆ ದೂರು ನೀಡುವಾಗ ರಾಜಕೀಯ ಪ್ರೇರಿತವಾಗಿರುವಂತೆ ಎಲ್ಲಿಯೂ ಕಂಡು ಬಂದಿರಲಿಲ್ಲ. ಆ ಬಳಿಕ ರಾಜಕೀಯ ಪ್ರೇರಿತವಾಗಿರುವುದು ಕಂಡು ಬರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ರಮೇಶ್ ಜಾರಕಿಹೊಳಿ ರಕ್ಷಿಸಲು ಪೊಲೀಸರು ಬಳಕೆಯಾಗುತ್ತಿದ್ದು, ರಾಜಕೀಯ ಪ್ರೇರಿತವಾಗಿ ನರೇಶ್ ಗೌಡ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಖುದ್ದು ಪೊನ್ನಣ್ಣ ಅವರೇ ವಾದಿಸಿದ್ದಾರೆ. ಮತ್ತೊಂದೆಡೆ ಯುವತಿ ಹಾಗೂ ಇತರೆ ಆರೋಪಿತರ ಪರ ವಕಾಲತ್ತು ವಹಿಸುತ್ತಿರುವ ವಕೀಲರು ಕೆಪಿಸಿಸಿ ಕಾನೂನು ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವವರೇ ಆಗಿದ್ದಾರೆ.
ಪೊನ್ನಣ್ಣ ಲೀಗಲ್ ಸೆಲ್ ಅಧ್ಯಕ್ಷರಾದರೆ, ಸಂಕೇತ್ ಏಣಗಿ ಹಾಗೂ ಸೂರ್ಯ ಮುಕುಂದ ರಾಜ್ ವಕ್ತಾರರಾಗಿದ್ದಾರೆ. ಮುಖ್ಯವಾಗಿ ಪ್ರಕರಣ ರಾಜಕೀಯ ಪ್ರೇರಿತ ಹೌದೋ ಅಲ್ಲವೋ ಎಂಬುದನ್ನು ಹೈಕೋರ್ಟ್ ಪರಿಗಣಿಸುವುದಿಲ್ಲ. ಬದಲಿಗೆ ಪ್ರಕರಣದಲ್ಲಿನ ಮೆರಿಟ್‌ಗಳನ್ನಷ್ಟೇ ಗಮನಿಸಿ ಕ್ರಮ ಜರುಗಿಸುತ್ತದೆ. ಹೀಗಾಗಿ, ಪ್ರಕರಣ ಮುಂದೆ ಯಾವೆಲ್ಲ ತಿರುವುಗಳಿಗೆ ಸಾಕ್ಷಿಯಾಗಲಿದೆ ಎಂಬುದು ಕಾನೂನು ವಲಯದಲ್ಲಿ ಕುತೂಲಹ ಹೆಚ್ಚಿಸಿದೆ.