ಬೆಂಗಳೂರು: ತ್ಯಾಜ್ಯ ನೀರನ್ನು ಸಂಸ್ಕರಿಸಿಯೇ ಕೆರೆ ಅಥವಾ ಇತರೆ ಜಲಮೂಲಗಳಿಗೆ ಹರಿಸಬೇಕಿದೆ. ನಗರೀಕರಣ ಪ್ರಕ್ರಿಯೆ ವೇಗವಾಗಿ ನಡೆಯುತ್ತಿದ್ದು, ನೈರ್ಮಲ್ಯ ಕಾಪಾಡಲು ರೂಪಿಸಲಾಗಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ನಿರ್ಮಾಣ ಕಾರ್ಯ ಸಾಕಷ್ಟು ಹಿಂದೆ ಬಿದ್ದಿದೆ. ಅದಕ್ಕೆ ಅನುದಾನದ ಕೊರತೆಯೇ ಕಾರಣ ಎನ್ನುತ್ತಿದೆ ಜಲಮಂಡಳಿ.
ಹೀಗಾಗಿ ಬೆಂಗಳೂರಿಲ್ಲಿ ಸಮರ್ಪಕವಾಗಿ ತ್ಯಾಜ್ಯ ನೀರು ಸಂಸ್ಕರಣೆಯಾಗುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಆದರೆ ಅದಿನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಇನ್ನೂ ಹಲವೆಡೆ ಪ್ರತ್ಯೇಕ ಪೈಪ್ಲೈನ್ ವ್ಯವಸ್ಥೆ ಇಲ್ಲದಿರುವ ಕಾರಣ ಕಾಲುವೆ, ವ್ಯಾಲಿಗಳಲ್ಲೂ ಚರಂಡಿ ಹಾಗೂ ಕಾರ್ಖಾನೆಗಳ ತ್ಯಾಜ್ಯ ನೀರು ಹರಿಯುವಂತಾಗಿದೆ.
ಇದನ್ನೂ ಓದಿ...ಏರೋ ಇಂಡಿಯಾ-21 ಯೋಜನೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪರಿಶೀಲನೆ
ವಸತಿ ಸಮುಚ್ಚಯಗಳಲ್ಲಿ ಪ್ರತ್ಯೇಕವಾಗಿ ಎಸ್ಟಿಪಿ ನಿರ್ಮಿಸಿ, ನೀರನ್ನು ಶುದ್ಧೀಕರಿಸಿಯೇ ಚರಂಡಿಗೆ ಹರಿಸಬೇಕೆಂಬ ಕಡ್ಡಾಯ ನಿಯಮವಿದ್ದರೂ ಹಲವೆಡೆ ಗಾಳಿಗೆ ತೂರಲಾಗಿದೆ. ಜಲಮಂಡಳಿಯ ಸಂಪರ್ಕ ಇಲ್ಲದ ಅಂದರೆ ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾಗಿರುವ 110 ಹಳ್ಳಿಗಳಿಗೆ ಮೂಲ ಸೌಕರ್ಯ ಒದಗಿಸುವ ಮುನ್ನವೇ ಲೇಔಟ್ಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಲೇಔಟ್ಗಳಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಿಲ್ಲ. ಆದರೂ ಸೆಪ್ಟಿಕ್ ಟ್ಯಾಂಕ್ ನಿರ್ಮಿಸಿ, ಖಾಸಗಿ ಟ್ಯಾಂಕ್ ಸ್ವಚ್ಛ ಮಾಡುವವರ ಮೂಲಕವೇ ಅವುಗಳ ಸ್ವಚ್ಛತೆ ಮಾಡಿಸಲಾಗುತ್ತಿದೆ. ಆದರೆ, ಕೆಲವರು ಅದರಿಂದ ದೂರ ಉಳಿದಿದ್ದಾರೆ.
ಜಲಮೂಲ ಸೇರುತ್ತಿರುವ ಕಾರ್ಖಾನೆಗಳ ತ್ಯಾಜ್ಯ ನೀರಿಗೆ ಇಲ್ಲ ಅಡೆತಡೆ ಇತ್ತೀಚೆಗೆ ಕೆಂಗೇರಿ ಸಮೀಪ ಟ್ಯಾಂಕರ್ ಮೂಲಕ ಕಾರ್ಖಾನೆಯೊಂದರ ರಾಸಾಯನಿಕ ನೀರನ್ನು ವೃಷಭಾವತಿ ವ್ಯಾಲಿಗೆ ಹರಿಸಲಾಗುತ್ತಿತ್ತು. ಆ ಸಂದರ್ಭದಲ್ಲೇ ದಾಳಿ ನಡೆಸಿದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ವಾಹನ ಜಪ್ತಿ ಮಾಡಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಜಲ ಮಾಲಿನ್ಯವಾಗದಂತೆ ತಡೆಯುವುದು ನಮ್ಮ ಮೊದಲ ಆದ್ಯತೆ. ಕಾಲುವೆಗಳಿಗೆ ತ್ಯಾಜ್ಯ ನೀರು ಹರಿಸುವವರ ವಿರುದ್ಧ ಕ್ರಮ ಜರುಗಿಸಲು ರಾತ್ರಿ ವೇಳೆ ಗಸ್ತು ವಾಹನ ನಿಯೋಜಿಸಲಾಗಿದೆ ಎನ್ನುತ್ತಾರೆ ಮಂಡಳಿಯ ಸದಸ್ಯ ಕಾರ್ಯದರ್ಶಿ.
ಅವಳಿನಗರ ಹುಬ್ಬಳ್ಳಿ-ಧಾರವಾಡದಲ್ಲಿ ಸುಮಾರು 20ಕ್ಕೂ ಅಧಿಕ ಸೆಪ್ಟಿಕ್ ಟ್ಯಾಂಕರ್ಗಳು ಕಾರ್ಯನಿರ್ವಹಿಸುತ್ತಿದ್ದು, ಅಪಾರ್ಟ್ಮೆಂಟ್ಗಳ ಕೊಳಚೆ ನೀರನ್ನು ಸಂಗ್ರಹಿಸಿ ಅತ್ಯಾಧುನಿಕ ಪದ್ಧತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಆದರೆ, ಹೊಸದಾಗಿ ನಿರ್ಮಿಸಿರುವ 20 ಮನೆಗಳಿರುವ ಅಪಾರ್ಟ್ಮೆಂಟ್ ಹಾಗೂ 10 ಎಕರೆಗೂ ಅಧಿಕ ಜಾಗದಲ್ಲಿ ನಿರ್ಮಾಣವಾಗಿರುವ ಲೇಔಟ್ಗಳಲ್ಲಿ ಸೆಪ್ಟಿಕ್ ಟ್ಯಾಂಕ್ಗಳನ್ನು ಕೂಡಿಸುವುದನ್ನು ಪಾಲಿಕೆ ಕಡ್ಡಾಯ ಮಾಡಿದೆ. ಆದರೂ ಕೆಲವು ಅಪಾರ್ಟ್ಮೆಂಟ್ಗಳಲ್ಲಿ ಕೊಳಚೆ ನೀರು ತುಂಬಿ ಹರಿಯುತ್ತಿದೆ.