ಬೆಂಗಳೂರು: ಕೊರೊನಾ ಸೋಂಕು ಸಾರಿಗೆ ನಿಗಮಗಳನ್ನು ನೆಲಕಚ್ಚುವಂತೆ ಮಾಡಿದ್ದು ಸುಳ್ಳಲ್ಲ. ತಿಂಗಳಾಯ್ತು ಅಂದರೆ ಸಾಕು, ಸಿಬ್ಬಂದಿಗೆ ಸಂಬಳ ನೀಡುವ ಚಿಂತೆ ಶುರುವಾಗುತ್ತೆ. ಇದೀಗ, ಪೂರ್ಣ ಪ್ರಮಾಣದಲ್ಲಿ ಬಸ್ಗಳು ಓಡಾಟ ನಡೆಸುತ್ತಿದ್ದರೂ ಸಾರಿಗೆ ನಿಗಮಗಳು ಚೇತರಿಕೆ ಕಾಣುತ್ತಿಲ್ಲ. ಇತ್ತ ಜುಲೈ ತಿಂಗಳ ವೇತನ ಸಿಗದೇ ಸಾರಿಗೆ ನೌಕರರ ಬದುಕು ದುಸ್ಥರವಾಗಿದೆ. ಹೀಗಾಗಿ, ನೂತನ ಸಾರಿಗೆ ಸಚಿವರಿಗೆ ಜುಲೈ ತಿಂಗಳ ವೇತನ ಕೊಡಿ ಎಂದು ಸಾರಿಗೆ ನೌಕರರು ಮನವಿ ಮಾಡಿದ್ದಾರೆ.
ಆಗಸ್ಟ್ 17ನೇ ತಾರೀಖಾದರೂ ನಾಲ್ಕು ಸಾರಿಗೆ ನಿಗಮಗಳಿಗೆ ಇನ್ನೂ ಜುಲೈ ತಿಂಗಳ ವೇತನ ಆಗಿಲ್ಲ. ಹೀಗಾಗಿ, ವರಮಹಾಲಕ್ಷ್ಮಿ ಹಬ್ಬ ಬರುತ್ತಿದೆ, ಮನೆಯಲ್ಲಿ ಹಬ್ಬ ಆಚರಿಸಲಾದರೂ ಸಂಬಳ ಕೊಡಿ ಅಂತ ಮನವಿ ಮಾಡಿದ್ದಾರೆ. ನಾಲ್ಕು ಸಾರಿಗೆ ನಿಗಮಗಳಿಗೆ ವೇತನ ನೀಡಲು 326 ಕೋಟಿ ರೂ. ಹಣ ಬೇಕು. ಸುಮಾರು 1.30 ಲಕ್ಷ ಸಾರಿಗೆ ನೌಕರರು ಇದ್ದಾರೆ. ಇತ್ತ ಕೋವಿಡ್ ಕಾರಣಕ್ಕೆ ಜುಲೈ ತಿಂಗಳವರೆಗೆ ಸರ್ಕಾರವೇ ಅನುದಾನ ಬಿಡುಗಡೆ ಮಾಡಿತ್ತು.