ಬೆಂಗಳೂರು: ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ವತಿಯಿಂದ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಅರಿವು ಶೈಕ್ಷಣಿಕ ಸಾಲ ಯೋಜನೆಯನ್ನು ಹೊಸದಾಗಿ ಮಾರ್ಪಾಡು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ತಿಳಿಸಿದರು.
ಇಂದು ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಸದಸ್ಯ ಪ್ರಿಯಾಂಕ ಖರ್ಗೆ ಅವರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಅರಿವು ಶೈಕ್ಷಣಿಕ ಸಾಲ ಯೋಜನೆ ಈವರೆಗೂ ವೃತ್ತಿಪರ ಕೋರ್ಸ್‍ಗಳಿಗೆ ಮಾತ್ರ ನೀಡಲಾಗುತ್ತಿತ್ತು. ಇದನ್ನು ಮಾರ್ಪಾಡು ಮಾಡಿದರೆ ಪದವಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮಾಡಲಾಗುವುದು ಎಂದು ಹೇಳಿದರು.
2019-20, 2020-21, 2021-22ನೇ ಸಾಲಿನಲ್ಲಿ ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಒಟ್ಟು 49,959 ವಿದ್ಯಾರ್ಥಿಗಳಿಗೆ 1,91,07,29,969 ಅನುದಾನ ನೀಡಲಾಗಿದೆ. ಈಗ ನಮ್ಮ ಸರ್ಕಾರ 6 ಸಾವಿರ ವಿದ್ಯಾರ್ಥಿಗಳಿಗೆ ಅನುದಾನ ಹೆಚ್ಚಿಸಿದೆ ಎಂದರು.
ರಾಜ್ಯದಲ್ಲಿ ಹೊಸ 100 ಪೊಲೀಸ್ ಠಾಣೆ: ರಾಜ್ಯದಲ್ಲಿ ಹೊಸ 100 ಪೊಲೀಸ್ ಠಾಣೆಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಪ್ರಶ್ನೆಗೆ ಉತ್ತರಿಸಿದರು.
ಈಗಾಗಲೇ ಹೊಸ ಪೊಲೀಸ್ ಠಾಣೆಗಳನ್ನು ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಶಿಥಿಲಾವಸ್ಥೆಯಲ್ಲಿರುವ ಠಾಣೆಗಳನ್ನು ಸಹ ಆಧುನೀಕರಣಗೊಳಿಸುವುದಾಗಿ ತಿಳಿಸಿದರು.