ಬೆಂಗಳೂರು: ರಾಜಧಾನಿ ಬೆಂಗಳೂರಿನ ಜನರನ್ನು ಮಳೆ-ಚಳಿಯಷ್ಟೇ ನಡುಗಿಸುತ್ತಿಲ್ಲ. ಬದಲಿಗೆ, ತರಕಾರಿ ಬೆಲೆ ಕೇಳಿದರೆ ಸಾಕು ಕೈ, ಕಾಲು ನಡುಗಲಾರಂಭಿಸುತ್ತದೆ.
ಕೆಲವು ತರಕಾರಿಗಳ ಬೆಲೆ ಪ್ರತಿ ಕೆ.ಜಿಗೆ 100 ಗಡಿದಾಟಿದೆ. ಅದರಲ್ಲೂ ಟೊಮೆಟೊ ಬೆಲೆ ಕೇಳುವಂತಿಲ್ಲ. ಅದು ಪೆಟ್ರೋಲ್ ಬೆಲೆಗಿಂತಲೂ ದುಬಾರಿಯಾಗಿದೆ. ಹೀಗಾಗಿ, ಕುಂತ್ರೂ ನಿಂತ್ರೂ ಈಗ ಜೀವಕ್ಕೆ ಮಾತ್ರ ಸಮಾಧಾನವಿಲ್ಲ ಎಂಬಂತಾಗಿದೆ. ಏಕೆಂದರೆ, ದಿನನಿತ್ಯ ಬಳಸುವ ಹಣ್ಣು, ತರಕಾರಿಯಿಂದ ಹಿಡಿದು ದಿನಸಿ ಬೆಲೆ ಗಗನಮುಖಿಯಾಗಿದೆ.
ಸತತ ಮಳೆಯಿಂದಾಗಿ ಟೊಮೆಟೊ ಬೆಲೆ ವಿಪರೀತ ಜಾಸ್ತಿಯಾಗಿದೆ. ಒಂದೆಡೆ ತೈಲ ಬೆಲೆ, ಮತ್ತೊಂದೆಡೆ ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಅಗತ್ಯ ವಸ್ತುಗಳನ್ನು ತರುವಾಗ ಸರಕು ಸಾಗಣೆ ವೆಚ್ಚವೂ ಹೆಚ್ಚಾಗಿದೆ. ಇದು ಗ್ರಾಹಕರ ಮೇಲೆ ನೇರ ಪರಿಣಾಮ ಬೀರುತ್ತಿದೆ. ಹೀಗಾಗಿ, ಇವತ್ತು ಟೊಮೆಟೊ ದರ ಕೆ.ಜಿಗೆ 103 ರೂಪಾಯಿ ಇದೆ.
ಇನ್ನು ಮೋಡ ಕವಿದ ವಾತಾವರಣ ಇರುವುದರಿಂದ ಹೊಲಗಳಲ್ಲಿ ಟೊಮೆಟೊ ಬೆಳೆ ಬೇಗನೆ ಕೊಳೆಯುತ್ತಿದೆ. ಹೀಗಾಗಿ, ಹೆಚ್ಚು ಖರೀದಿಸಲೂ ಆಗದೇ ಸಂಗ್ರಹಿಸಿಟ್ಟುಕೊಳ್ಳಲು ಆಗದೇ ಜನಸಾಮಾನ್ಯರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಇದನ್ನೂ ಓದಿ:ಪೆಟ್ರೋಲ್, ಡೀಸೆಲ್‌ಗಿಂತಲೂ ಕೆಲವು ತರಕಾರಿ ದುಬಾರಿ: ಟೊಮೆಟೋ ಪ್ರತಿ ಕೆ.ಜಿಗೆ 100 ರೂಪಾಯಿ!