ಬೆಂಗಳೂರು: ಈ ಬಾರಿ ಚಾಮರಾಜಪೇಟೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಈದ್ಗಾ ಮೈದಾನದಲ್ಲಿ ಆಗಸ್ಟ್ 15ರಂದು ಧ್ವಜಾರೋಹಣ ಮಾಡಿ, ಅತ್ಯಂತ ಸಡಗರದಿಂದ ಸ್ವಾತಂತ್ರ್ಯೋತ್ಸವ ಆಚರಿಸಲಿದ್ದೇವೆ ಎಂದು ಶಾಸಕ ಜಮೀರ್ ಅಹಮದ್ ತಿಳಿಸಿದರು.
ಧ್ವಜಾರೋಹಣ ಕಾರ್ಯಕ್ರಮಕ್ಕಾಗಿ ಸಿದ್ಧತೆ ಮಾಡಿಕೊಳ್ಳಲು ಇಂದು ಚಾಮರಾಜಪೇಟೆಯ ಆಟದ ಮೈದಾನವನ್ನು ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಮಾಧ್ಯಮದವರು ದಯವಿಟ್ಟು ಗೊಂದಲ ಸೃಷ್ಟಿಸಬೇಡಿ. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಹಾಗೂ ಕನ್ನಡ ರಾಜ್ಯೋತ್ಸವದಂದು ಚಾಮರಾಜಪೇಟೆಯ ಆಟದ ಮೈದಾನದಲ್ಲಿ ಇನ್ಮುಂದೆ ಪ್ರತಿ ವರ್ಷ ಧ್ವಜಾರೋಹಣ ನೆರವೇರಿಸುತ್ತೇವೆ. ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಬಿ.ವಿ ಗಣೇಶ್, ಬಿಬಿಎಂಪಿ ಹಾಲಿ ಸದಸ್ಯರಾದ ಕೋಕಿಲ ಚಂದ್ರಶೇಖರ್ ಹಾಗೂ ಮತ್ತಿತರ ದೇವಸ್ಥಾನಗಳ ಸದಸ್ಯರು ಮುಖಂಡರ ಜೊತೆ ಚರ್ಚಿಸಿ, ಈ ಬಾರಿ ಆಗಸ್ಟ್ 15ರಂದು ಧ್ವಜಾರೋಹಣ ಕಾರ್ಯಕ್ರಮಕ್ಕಾಗಿ ಸ್ಥಳ ನಿಗದಿ ಪಡಿಸುತ್ತೇವೆ ಎಂದು ತಿಳಿಸಿದರು.
ಚಾಮರಾಜಪೇಟೆಯ ಈದ್ಗಾ ಮೈದಾನ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಕಂದಾಯ ಇಲಾಖೆಗೆ ಸೇರಿದ್ದು ಎಂದು ಬಿಬಿಎಂಪಿ ಹೇಳಿದೆ. ಇದರ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಾಸಕರು, 1999ಕ್ಕಿಂತ ಮೊದಲು ವಕ್ಫ್ ಮಂಡಳಿ ಹಾಗೂ ಮುಜರಾಯಿ ಇಲಾಖೆ ಎರಡೂ ಕಂದಾಯ ಇಲಾಖೆ ಅಧೀನದಲ್ಲೇ ಇದ್ದವು. ಎಸ್.ಎಂ ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದಾಗ ವಕ್ಫ್ ಮಂಡಳಿಯನ್ನು ಪ್ರತ್ಯೇಕಿಸಿದರು. ಮೈದಾನದ ವಿಚಾರವನ್ನು ವಕ್ಫ್ ಮಂಡಳಿಯವರು ನೋಡಿಕೊಳ್ಳುತ್ತಾರೆ. ಸದ್ಯ ನಾವು ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸುವ ತಯಾರಿಯಲ್ಲಿದ್ದೇವೆ ಎಂದು ಹೇಳಿದರು.
ಗಣೇಶ ಹಬ್ಬಕ್ಕೆ ಅವಕಾಶವಿಲ್ಲ: ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವಕ್ಕೆ ಅವಕಾಶ ಇದೆ. ಆದರೆ ಗಣೇಶ ಹಬ್ಬಕ್ಕೆ ಅವಕಾಶವಿಲ್ಲ. ಈದ್ಗಾ ಮೈದಾನದಲ್ಲಿ ಎಷ್ಟು ಜನ ಬೇಕಾದರೂ ಸೇರಲಿ, ಜೊತೆಯಾಗಿ ಸ್ವಾತಂತ್ರ್ಯ ದಿನಾಚರಣೆ ಮಾಡಲಾಗುವುದು. ಆದ್ರೆ ಗಣೇಶ ಹಬ್ಬದ ಆಚರಣೆ ಮಾಡುವುದಿಲ್ಲ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಖಾನ್ ಹೇಳಿದರು.
ಓದಿ:ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಆಗಸ್ಟ್ 15 ರೊಳಗೆ ಇತ್ಯರ್ಥ: ಆಯುಕ್ತ ತುಷಾರ್ ಗಿರಿನಾಥ್